ಶೀತ ವಾತಾವರಣಕ್ಕೆ ‘ಹೈ ಫೀವರ್’: ಜಿಲ್ಲೆಯಲ್ಲಿ ಜ್ವರ, ಕೆಮ್ಮಿಗೆ ಹೈರಾಣ

'High fever' due to cold weather Mandya
Published on

ಮಂಡ್ಯ: ಜಿಲ್ಲೆಯಲ್ಲಿ ಶೀತದ ವಾತಾವರಣದಿಂದಾಗಿ ಜನರ ಆರೋಗ್ಯ ಹದಗೆಡುತ್ತಿದೆ. ಅದರಲ್ಲೂ ಮಕ್ಕಳನ್ನು ಜ್ವರ, ನೆಗಡಿ, ಕೆಮ್ಮು ಹೆಚ್ಚಾಗಿ ಬಾಧಿಸುತ್ತಿದೆ. ಇದರಿಂದಾಗಿ ಆಸ್ಪತ್ರೆ ಹಾಗೂ ಖಾಸಗಿ ಕ್ಲಿನಿಕ್‌ಗೆ ಬರುವ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಜುಲೈ, ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯ. ಆದರೆ ಈ ಬಾರಿ ‘ಹೈ ಫೀವರ್’ ಹೆಚ್ಚಾಗಿ ಕಂಡುಬರುತ್ತಿದೆ.

ಕಳೆದ ಮೂರು ತಿಂಗಳಿಂದ ಬಿಸಿಲಿನ ವಾತಾವರಣವಿಲ್ಲ. ಹಾಗೊಮ್ಮೆ ಹೀಗೊಮ್ಮೆ ಬಿಸಿಲು ಕಾಣಿಸುತ್ತಿದೆ. ಇನ್ನೊಂದೆಡೆ ಮಳೆ ಕೂಡ ನಿರಂತರವಾಗಿ ಸುರಿಯುತ್ತಿಲ್ಲ. ಶೀತದ ವಾತಾವರಣ ಹಾಗಿದ್ದಾಂಗೆ ಬದಲಾಗುತ್ತಿದೆ. ಬೆಳಗ್ಗೆ ಚಳಿಯಿದ್ದರೆ, ಮಧ್ಯಾಹ್ನದ ಹೊತ್ತಿಗೆ ಸೆಕೆ, ಸಂಜೆ ಹೊತ್ತಿಗೆ ತಣ್ಣನೆ ಹಾಗೂ ರಾತ್ರಿ ವೇಳೆಗೆ ಚಳಿ ಇರುತ್ತದೆ. ವಾತಾವರಣದಲ್ಲಿನ ಬದಲಾವಣೆಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಈ ವರ್ಷ ಫೆಬ್ರವರಿ ತಿಂಗಳಲ್ಲೇ ಬಿಸಿಲು ಪ್ರಾರಂಭವಾಗಿ ಏಪ್ರಿಲ್-ಮೇ ತಿಂಗಳವರೆವಿಗೂ ಮುಂದುವರೆದಿತ್ತು. ಚಳಿಗಾಲದಲ್ಲಿ ಬಿಸಿಲು ಜನರನ್ನು ಕಾಡಿತ್ತು. ಬಳಿಕ ಬೇಸಿಗೆಯಲ್ಲಿ ಜೋರು ಮಳೆ ಶುರುವಾಗಿತ್ತು. ಜುಲೈನಿಂದಲೇ ಬಿಸಿಲಿನ ಪ್ರಮಾಣ ಕಡಿಮೆಯಾಗಿ ಶೀತ ವಾತಾವರಣ ಸೃಷ್ಟಿಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣದಂತಾಗುತ್ತಿದೆ. ಅಕ್ಟೋಬರ್‌ನಲ್ಲಿ ದಸರಾ, ಆಯುಧಪೂಜೆ ಸಂದರ್ಭದಲ್ಲಿ ಸ್ವಲ್ಪ ಮಳೆಯಾಗುವುದು ವಾಡಿಕೆ. ಆದರೆ, ಈ ಬಾರಿ ವಾತಾವರಣವೇ ಬದಲಾಗಿರುವುದು ವಿಶೇಷ. ಸಾಮಾನ್ಯವಾಗಿ ಪ್ರಸ್ತುತ ಬಿಸಿಲಿನ ವಾತಾವರಣ ಬರಬೇಕಿತ್ತು. ಆದರೆ ಈ ಬಾರಿ ಮಳೆಯೂ ವಿಚಿತ್ರವಾಗಿದೆ. ಒಮ್ಮೆ ಜೋರು ಮಳೆಯಾದರೆ, ಮತ್ತೊಮ್ಮೆ ತುಂತುರು ಹನಿಗಳೊಂದಿಗೆ ಸುರಿಯುತ್ತಿದೆ.

ಒಬ್ಬರಿಂದ ಮತ್ತೊಬ್ಬರಿಗೆ ಜ್ವರ ಬದಲಾದ ವಾತಾವರಣದಿಂದಾಗಿ ಜನರ ಕ್ರಿಯಾಶೀಲತೆಯನ್ನು ಕಡಿಮೆ ಮಾಡುವ ಜತೆಗೆ ಅನಾರೋಗ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ಸಾಂಕ್ರಾಮಿಕ ರೋಗಗಳು, ಅಲರ್ಜಿ, ಅಸ್ತಮಾ, ಚರ್ಮ ಸಂಬಂಧಿ ರೋಗಗಳು, ಶೀತ ಸಂಬಂಧಿ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತಿದೆ. ಅದರಲ್ಲೂ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಹೆಚ್ಚಾಗಿ ಕಂಡು ಬರುತ್ತಿದೆ. ಅಂತೆಯೇ ಕುಟುಂಬದ ಒಬ್ಬರಲ್ಲಿ ಜ್ವರ ಕಾಣಿಸಿಕೊಂಡರೆ ಇಡೀ ಕುಟುಂಬದವರಿಗೆ ಹರಡುತ್ತಿದೆ. ವೈರಲ್ ಫೀವರ್, ಕೆಮ್ಮು, ನೆಗಡಿ, ಗಂಟಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರೇ ಹೆಚ್ಚಾಗಿದ್ದಾರೆ. ಇದರಿಂದ ಜನರು ಆಸ್ಪತ್ರೆಗಳು, ಕ್ಲಿನಿಕ್‌ಗಳು, ನರ್ಸಿಂಗ್ ಹೋಂಗಳಿಗೆ ಎಡತಾಕುತ್ತಿದ್ದಾರೆ. ಅಲರ್ಜಿ, ಅಸ್ತಮಾ ಇರುವವರು ಚಳಿಗಾಲದಲ್ಲಿ ಹೆಚ್ಚು ಜಾಗರೂಕರಾಗಿರಬೇಕಿದೆ. ಇಂತಹ ಸಮಯದಲ್ಲಿ ಎಚ್ಚರ ತಪ್ಪಿದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಶೀತದಿಂದ ಶುರುವಾಗಿ ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಇನ್ನು ಚಳಿಗಾಲದಲ್ಲಿ ಎಣ್ಣೆ ಅಂಶ ಕಡಿಮೆಯಾಗಿ ಚರ್ಮ ಒಣಗುತ್ತಿದೆ. ಕೆಲವೊಮ್ಮೆ ಚರ್ಮ ಒಡೆದುಕೊಳ್ಳುತ್ತದೆ. ವಿವಿಧ ರೀತಿಯ ಚರ್ಮ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಅಲರ್ಜಿ ಉಲ್ಬಣಗೊಳ್ಳುವ ಸಾಧ್ಯತೆ ಇದೆ.

ಮಳೆಗಾಲದ ಸಮಯದಲ್ಲಿ ಜ್ವರ, ನೆಗಡಿ, ಕೆಮ್ಮು ರೋಗಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅದರಲ್ಲಿಯೂ ಹಿರಿಯರ ಬಗ್ಗೆ ಕಾಳಜಿ ವಹಿಸಬೇಕು. ಕರೊನಾ ಸಮಯದಲ್ಲಿ ತೆಗೆದುಕೊಂಡಿದ್ದಂತಹ ಕ್ರಮಗಳನ್ನೇ ಈಗಲೂ ಅನುಸರಿಸಬೇಕು. ಡಾ.ಕೆ.ಮೋಹನ್ ಜಿಲ್ಲಾ ಆರೋಗ್ಯಾಧಿಕಾರಿ ಈ ವರ್ಷ ಹೆಚ್ಚಿನ ಸಂಖ್ಯೆಯ ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ. ಅಂತೆಯೇ ಹೈ ಫೀವರ್ ಹೆಚ್ಚಾಗಿ ಕಂಡುಬರುತ್ತಿದೆ. ಶೀತ ವಾತಾವರಣದ ಜತೆಗೆ ಸೊಳ್ಳೆಗಳಿಂದಲೂ ಜ್ವರ ಬರಬಹುದು. ಅಂತೆಯೇ ಒಬ್ಬರಿಂದ ಮತ್ತೊಬ್ಬರಿಗೆ ಜ್ವರ ಹರಡುತ್ತಿರುವುದರಿಂದ ಪಾಲಕರು ಎಚ್ಚರಿಕೆ ವಹಿಸಬೇಕು. ಮಕ್ಕಳಲ್ಲಿ ನೀರಿನಾಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಡಾ.ಕೀರ್ತಿ ಮಕ್ಕಳ ತಜ್ಞ, ಮಿಮ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net