

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯು ದೊಡ್ಡ ಹೈ ಡ್ರಾಮ್ ಗೆ ಸಾಕ್ಷಿಯಾಯಿತು.
ಒಂದೆಡೆ ಕಾಂಗ್ರೆಸ್ ನಾಯಕರು, ಮತ್ತೊಂದೆಡೆ ಅಧಿಕಾರಿಗಳು ಮತ್ತು ಸಂಸದರ ನಡುವೆ ಮಾತಿನ ಜಟಾಪಟಿಯೇ ನಡೆಯಿತು.
ಚುನಾವಣಾ ಕೇಂದ್ರ ಕಚೇರಿಯ ಆವರಣದಲ್ಲಿ ಸದಸ್ಯರನ್ನು ತಡೆದು ವಿಪ್ ಆದೇಶದ ಪ್ರತಿಯನ್ನು ನೀಡಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಸೇರಿದಂತೆ ಕಾಂಗ್ರೆಸ್ ನಾಯಕರಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ಡಾ ಕೆ.ಸುಧಾಕರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಚುನಾವಣಾಧಿಕಾರಿಗಳಿಗೆ ದೂರು ನೀಡಿದರು.
*ಅಡ್ಡ ನಿಂತು ಪ್ರಶ್ನಿಸಿದ ಸಂಸದರು*
ಬಿಜೆಪಿ ಬೆಂಬಲಿಸಿ ಸಂಸದ ಡಾ ಕೆ.ಸುಧಾಕರ್ ರೊಂದಿಗೆ 18 ಸದಸ್ಯರು ಖಾಸಗಿ ಬಸ್ಸಿನಲ್ಲಿ ಭದ್ರತೆಯಲ್ಲಿ ನಗರಸಭಾ ಕಚೇರಿಗೆ ಆಗಮಿಸಿದರು. ಇದೇ ವೇಳೆ ಕಾಂಗ್ರೆಸ್ ನಾಯಕರು ಅಡ್ಡಲಾಗಿ ನಿಂತಿರುವುದನ್ನು ನೋಡಿ, ಸುಧಾಕರ್ ಕಿಡಿಕಾರಿದರು.
ಚುನಾವಣೆ ನಡೆಯುವ 200 ಮೀಟರ್ ವ್ಯಾಪ್ತಿಯೊಳಗೆ ಮತದಾರರನ್ನು ಬಿಟ್ಟು ಇತರರಿಗೆ ಒಳಗೆ ಪ್ರವೇಶಿಸಲು ಅವಕಾಶವಿಲ್ಲ. ಹೇಗೆ ರಾಜಕೀಯ ನಾಯಕರು ಇಲ್ಲಿ ಇದ್ದಾರೆ. ಕಾನೂನು ನಿಯಮಗಳನ್ನು ಹೀಗೇನಾ ಅಧಿಕಾರಿಗಳು ಪಾಲಿಸುವುದು ಎಂದು ಪ್ರಶ್ನಿಸಿದರು.
ಪೊಲೀಸರು ತಕ್ಷಣ ಅನ್ಯ ವ್ಯಕ್ತಿಗಳನ್ನು ಹೊರಗೆ ಕಳುಹಿಸಬೇಕು. ನಮಗೆ ಅಡ್ಡ ಬರಬಾರದು. ಯಾರಾದರೂ ಬಂದು ತಡೆದರೆ ಹೇಗೆ ರಕ್ಷಣೆ ನೀಡುತ್ತೀರಿ, ಇಲ್ಲಿನ ಕಾರ್ಯ ವೈಖರಿಯನ್ನು ಗಂಭೀರವಾಗಿ ಪರಿಗಣಿಸಿ ಹಿರಿಯ ಅಧಿಕಾರಿಗಳಿಗೆ ದೂರು ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಡಿವೈಎಸ್ಪಿ ಶಿವಕುಮಾರ್ ಮನವೊಲಿಸಲು ಬಂದಾಗ ಕಾನೂನು ಪಾಠ ಮಾಡಲು ನಮಗೆ ಬರಬೇಡಿ, ಮೊದಲು ನಿಯಮಾನುಸಾರ ಕೆಲಸ ನಿರ್ವಹಿಸಿ, ಆ ಮೇಲೆ ಇಲ್ಲಿ ಆಗುವ ಸಮಸ್ಯೆಗಳಿಗೆ ನೀವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ವತಃ ಸದಸ್ಯರಿದ್ದ ಬಸ್ಸಿನ ಬಾಗಿಲು ಮುಂಭಾಗ ಅಡ್ಡಲಾಗಿ ನಿಂತು, ಸ್ವಪಕ್ಷೀಯರಿಗೆ ಧೈರ್ಯ ತುಂಬಿದರು. ಹಾಗೆಯೇ ಸದಸ್ಯರು ಕೈ ಹಿಡಿದು ಕಚೇರಿಯೊಳಗೆ ಕರೆದುಕೊಂಡು ಹೋದರು.