ಆಸ್ತಿ ವಿವರ ಸಲ್ಲಿಸದ ಪಾಲಿಕೆ ಸದಸ್ಯರ ಅನರ್ಹತೆ: ಹೈಕೋರ್ಟ್ ಎಚ್ಚರಿಕೆ

HighCourt 20 Feb 20
Published on

ಬೆಂಗಳೂರು: ನಿಯಮದಂತೆ ಪ್ರತಿ ವರ್ಷ ತಮ್ಮ ಆಸ್ತಿ ಹಾಗೂ ಸಾಲದ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರನ್ನು ಅನರ್ಹಗೊಳಿಸುವುದಾಗಿ ಹೈಕೋರ್ಟ್ ಮೌಖಿಕ ಎಚ್ಚರಿಕೆ ನೀಡಿದೆ. ಪಾಲಿಕೆಯ 34 ಸದಸ್ಯರು ತಮ್ಮ ಹಾಗೂ ಕುಟುಂಬ ಸದಸ್ಯರ ಆಸ್ತಿ ಮತ್ತು ಸಾಲದ ವಿವರಗಳನ್ನು ಮೇಯರ್‌ಗೆ ಒದಗಿಸಿಲ್ಲ ಎಂದು ಆರೋಪಿಸಿ ಕೆ. ಅನಿಲ್ ಕುಮಾರ್ ಶೆಟ್ಟಿ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಈ ಎಚ್ಚರಿಕೆ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಝರ್ ಮೀರ್, ಪಾಲಿಕೆಯ 34 ಸದಸ್ಯರು ಈವರೆಗೂ ತಮ್ಮ ಆಸ್ತಿ ಹಾಗೂ ಸಾಲದ ವಿವರ ಸಲ್ಲಿಸಿಲ್ಲ ಎಂದು ತಿಳಿಸಿದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಕೆಎಂಸಿ ಕಾಯ್ದೆಯ ಸೆಕ್ಷನ್ 19ರ ಪ್ರಕಾರ ಪಾಲಿಕೆಯ ಸದಸ್ಯರು ಪ್ರತಿ ವರ್ಷ ತಮ್ಮ ಹಾಗೂ ಕುಟುಂಬ ಸದಸ್ಯರ ಆಸ್ತಿ ಮತ್ತು ಸಾಲದ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಆದರೆ, ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಬಿಬಿಎಂಪಿಯ ಕೆಲ ಸದಸ್ಯರು ವಿಫಲರಾಗಿದ್ದಾರೆ. ಅಂಥವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿತು.

ಪ್ರತಿವಾದಿಗಳಾಗಿರುವ 34 ಪಾಲಿಕೆ ಸದಸ್ಯರು ಆಸ್ತಿ ವಿವರ ಒದಗಿಸಿರುವ ಕುರಿತ ದಾಖಲೆಗಳು ಹಾಗೂ ವಿವರಣೆಗಳನ್ನು ಒಂದು ವಾರದೊಳಗೆ ಬಿಬಿಎಂಪಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ, ಆ ಎಲ್ಲ ಸದಸ್ಯರನ್ನು ಅನರ್ಹಗೊಳಿಸಲು ಆದೇಶಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಪೀಠ ಅರ್ಜಿ ವಿಚಾರಣೆಯನ್ನು ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net