

ಬೆಂಗಳೂರು: ವಿಧಾನಸೌಧದ ಎದುರಿನಲ್ಲಿರುವ ಹೈಕೋರ್ಟ್ ಅನ್ನು ಬೇರೆಡೆಗೆ ಸ್ಥಳಾಂತರಿಸುವ ಬೇಡಿಕೆ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದ್ದು, ಹೊಸ ಕಟ್ಟಡಕ್ಕಾಗಿ ಜಾಗದ ಹುಡುಕಾಟ ನಡೆದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಕಬ್ಬನ್ ಪಾರ್ಕ್‌ನಲ್ಲಿ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ನಿಮಿತ್ತ ಭಾನುವಾರ ನಡೆದ ನಾಗರಿಕರ ಜತೆ ಸಂವಾದದಲ್ಲಿ ಈ ವಿಷಯ ಪ್ರಸ್ತಾಪಿಸಿದ ಡಿಸಿಎಂ, ಹೈಕೋರ್ಟ್ ಸ್ಥಳಾಂತರಿಸಲು 15- 20 ಎಕರೆ ಜಾಗ ಅಗತ್ಯವೆಂದು ವಕೀಲ ವೃಂದ, ಮುಖ್ಯ ನ್ಯಾಯಮೂರ್ತಿಯವರು ಮನವಿ ಮಾಡಿದ್ದಾರೆ. ಈ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ನ್ಯಾಯಾಲಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸೂಕ್ತ ಜಾಗವನ್ನು ಆಯ್ಕೆ ಮಾಡಲಾಗುವುದು ಎಂದರು.
ಹೈಕೋರ್ಟ್‌ನ ಹಾಲಿ ಕಟ್ಟಡವು ಐತಿಹಾಸಿಕ ಮಹತ್ವ ಪಡೆದಿರುವ ಕಾರಣಕ್ಕೆ ಅದನ್ನು ಏನೂ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಸೌಲಭ್ಯ ಕಲ್ಪಿಸಲು ಸ್ಥಳಾವಕಾಶದ ಕೊರತೆ ಇದೆ. ಹಾಗಂತ ಉಚ್ಚ ನ್ಯಾಯಾಲಯವನ್ನು ನಗರದ ಹೊರಗೆ ಸ್ಥಾಪಿಸಲು ಸಾಧ್ಯವಿಲ್ಲ. ಹಾಗಾಗಿ ಸೂಕ್ತ ಸ್ಥಳ ಗುರುತಿಸುವ ಕೆಲಸ ನಡೆಯುತ್ತಿದೆ. ಕಕ್ಷಿದಾರರು, ವಕೀಲರಿಗೆ ಅನುಕೂಲವಾಗುವಂತಹ ಜಾಗ ತಲಾಶ್ ಮಾಡಬೇಕಿದೆ. ಕೆಲ ವಕೀಲರು ರೇಸ್ ಕೋರ್ಸ್ ಜಾಗವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಒಂದಷ್ಟು ಕಾನೂನಾತ್ಮಕ ತೊಡಕು ಇರುವ ಕಾರಣಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಹೈಟೆಕ್ ಕ್ಯಾಮೆರಾ ಅಳವಡಿಕೆ:
ಕೆಲ ದಶಕಗಳ ಹಿಂದೆ ನಗರದಲ್ಲಿನ ಎಲ್ಲ ಹೋರಾಟ, ಪ್ರತಿಭಟನೆಗಳು ಕಬ್ಬನ್ ಪಾಕ್‌ನಲ್ಲಿಯೇ ನಡೆಯುತ್ತಿತ್ತು. ಎಸ್.ಎಂ.ಕೃಷ್ಣ ಅಧಿಕಾರವಧಿಯಲ್ಲಿ ಇದನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸ್ಥಳಾಂತರಿಸಲಾಯಿತು. ಸದ್ಯ ಈ ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದು, ಯಾರು ಎಷ್ಟು ಗಂಟೆಗೆ ಒಳ ಬಂದರು, ಹೊರ ಹೋದರು ಎಂಬುದು ದಾಖಲಾಗುತ್ತಿಲ್ಲ. ಭದ್ರತೆ ಕಾರಣಕ್ಕೆ ಜನಸಂಚಾರದ ಮೇಲೆ ನಿಗಾ ಇಡಲು ಹೈಟೆಕ್ ಕ್ಯಾಮೆರಾ ಅಳವಡಿಸಲಾಗುವುದು. ಇದರ ವೀಕ್ಷಣಾ ವ್ಯವಸ್ಥೆಯನ್ನು ಆಯುಕ್ತರ ಕಚೇರಿಯಲ್ಲಿ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ವಿವರಿಸಿದರು.
ಈ ಹಿಂದೆ ಕಬ್ಬನ್ ಪಾರ್ಕ್ 330 ಎಕರೆ ವಿಸ್ತೀರ್ಣ ಇದ್ದು, ಈಗ 196 ಎಕರೆಗೆ ಕುಗ್ಗಿದೆ. ಹಾಗಾಗಿ ನಗರದ ಪ್ರಮುಖ ಉದ್ಯಾನವನ್ನು ಸಂರಕ್ಷಿಸಬೇಕು. ಉದ್ಯಾನದ ಒಳಗಿರುವ ಎಲ್ಲ ಗುತ್ತಿಗೆ ಕಟ್ಟಡಗಳನ್ನು ತೆರವುಗೊಳಿಸಬೇಕು. ವಾಣಿಜ್ಯೀಕರಣಕ್ಕೆ ಅವಕಾಶ ಕಲ್ಪಿಸಬಾರದು ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಪದಾಧಿಕಾರಿಯೊಬ್ಬರು ಡಿಸಿಎಂಗೆ ಮನವಿ ಸಲ್ಲಿಸಿದರು.