ಮೈಸೂರು: ಮಲೆ ಮಹದೇಶ್ವರಬೆಟ್ಟದಲ್ಲಿರುವ 108 ಎತ್ತರದ ಮಹದೇಶ್ವರ ಪ್ರತಿಮೆ ಕಟ್ಟಡದಲ್ಲಿರುವ ವಸ್ತು ಸಂಗ್ರಹಾಲಯ ಉದ್ಘಾಟನೆಗೆ ಹೈಕೋರ್ಟ್ ತಡೆ ನೀಡಿದೆ ಎಂದು ಶ್ರೀಮಹದೇಶ್ವರಸ್ವಾಮಿಯ ಎಣ್ಣೆಮಜ್ಜನ ಸೇವಾಕರ್ತರಾದ ಸಿ.ಸಿದ್ದಪ್ಪ ಹೇಳಿದರು.
ಶತಮಾನಗಳಿಂದಲೂ ಮಳವಳ್ಳಿ ತಾಲೂಕು ಸರಗೂರು ಅಯ್ಯನಮಠ ನಮ್ಮ ಕುಟುಂಬದಿಂದ ಪ್ರತಿ ತಿಂಗಳು ಅಮಾವಾಸ್ಯೆ ಹಿಂದಿನ ದಿನ ಮಹದೇಶ್ವರರಿಗೆ ಎಣ್ಣೆ ಮಜ್ಜನ ಮಾಡಿಕೊಂಡು ಬರುತ್ತಿದೆ. ಆದರೆ ಮಹದೇಶ್ವರರ ಇತಿಹಾಸ ತಿಳಿಸುವ ಈ ವಸ್ತುಪ್ರದರ್ಶನದ ಮಾಹಿತಿಯಲ್ಲಿ ಮರೆ ಮಾಚಲಾಗಿದೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ವಸ್ತು ಸಂಗ್ರಹಾಲಯದಲ್ಲಿ ಮಹದೇಶ್ವರರ ಇತಿಹಾಸದೊಡನೆ, ಸಂಬಂಧಿತ ಇತರರ ಮಾಹಿತಿಯೂ ಇದೆ. ಆದರೆ ಎಣ್ಣೆಮಜ್ಜನ ಸೇವಾಕರ್ತರ ಇತಿಹಾಸ ತಿಳಿಸುವ ಕೆಲಸ ನಡೆದಿಲ್ಲ. ಈ ಕುರಿತು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದ್ದರೂ ಸರಿಪಡಿಸಿಲ್ಲ. ಹಾಗಾಗಿ ವಸ್ತು ಸಂಗ್ರಹಾಲಯ ಉದ್ಘಾಟನೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ ಎಂದು ಹೇಳಿದರು.
ಆದರೆ, ಇತ್ತೀಚೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಶೀಘ್ರದಲ್ಲೇ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆ ವೇಳೆ ವಸ್ತು ಸಂಗ್ರಹಾಲಯ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ತಾವು ತಡೆಯಾಜ್ಞೆ ತಂದಿರುವ ಕಾರಣ ಒಂದು ವೇಳೆ ಉದ್ಘಾಟಿಸಿದರೆ ಅದು ನ್ಯಾಯಾಂಗ ನಿಂದನೆ ಆಗಲಿದೆ ಎಂದರು.
ಸೇವಾಕರ್ತರಾದ ದೊಡ್ಡಸ್ವಾಮಿ, ಕಾಳಶೆಟ್ಟಿ, ಮಹದೇವಶೆಟ್ಟಿ, ಶಿವರಾಜ್ ಇದ್ದರು.