ವಿವಾದಿತ ಸ್ಥಳದಲ್ಲಿ ಮದರಸಾ ಆರಂಭಕ್ಕೆ ಸಂಬಂಧ ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆ

ort-order.
Published on

ನಗರದ ಕ್ಯಾತಮಾರನಹಳ್ಳಿಯ ವಿವಾದಿತ ಸ್ಥಳದಲ್ಲಿ ಮದರಸಾ ಆರಂಭ ಸಂಬಂಧ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅನುಮತಿ ನೀಡಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಜಿಲ್ಲಾಡಳಿತ ನೀಡಿದ್ದ ಆದೇಶಕ್ಕೆ ತಡೆ ನೀಡಿರುವ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಯಥಾಸ್ಥಿತಿ ಕಾಪಾಡುವಂತೆ ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಧಿಕಾರಿ ಸಭೆ ನಡೆಸಿ, ವಿವಾದಿತ ಸ್ಥಳದಲ್ಲಿ ಮದರಸಾ ಆರಂಭಿಸಲು ಅನುಮತಿ ನೀಡಿದ್ದರು. ಕ್ಯಾತಮಾರನಹಳ್ಳಿ ಶ್ರೀ ಹುಲಿಯಮ್ಮ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್‌ನವರು, ಜಿಲ್ಲಾಧಿಕಾರಿ ಆದೇಶದ ವಿರುದ್ಧ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಹೈಕೋರ್ಟ್‌ನಲ್ಲಿ ಟ್ರಸ್ಟ್ ಪರವಾಗಿ ವಕೀಲರು ಮಂಡಿಸಿದ ವಾದ ಆಲಿಸಿದ ನ್ಯಾಯಮೂರ್ತಿಗಳು, ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ವಿಚಾರಣೆ ವೇಳೆ ಟ್ರಸ್ಟ್ ಪರ ವಕೀಲರು, ವಿವಾದಿತ ಸ್ಥಳದಲ್ಲಿ ಮದರಸಾ ಆರಂಭಿಸಿದರೆ ಕಾನೂನು- ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರು ವರದಿ ನೀಡಿದ್ದರೂ ಅದನ್ನು ಪರಿಗಣಿಸಿಲ್ಲ. ಜತೆಗೆ ಉದಯಗಿರಿಯ ಹಲೀಮಾ ಸಾದಿಯಾ ಎಜುಕೇಷನ್ ಇನ್‌ಸ್ಟಿಟ್ಯೂಷನ್ ಆಫ್ ಮಸ್ಜಿದ್ ಇ-ಸಿದ್ದಿಕಿ-ಇ-ಅಕ್ಬರ್ ಟ್ರಸ್ಟ್‌ನವರು ಅರೆಬಿಕ್ ಶಾಲೆ ನಡೆಸಲು ಅನುಮತಿ ನೀಡಿರುವುದು ಕಾನೂನುಬಾಹಿರವಾಗಿದೆ ಎಂದು ವಾದ ಮಂಡಿಸಿದರು. ‘ವಿವಾದಿತ ಸ್ಥಳದಲ್ಲಿ ಮದರಸಾ ಆರಂಭವಾದರೆ ಕಾನೂನು ಸುವ್ಯವಸ್ಥೆಯೊಂದಿಗೆ ಕೋಮುಸೌಹಾರ್ದತೆಗೆ ಧಕ್ಕೆಯಾಗಲಿದೆ ಎಂದು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಮದರಸಾ ಆರಂಭಕ್ಕೆ ತಡೆಯಾಜ್ಞೆ ನೀಡಲಾಗಿದೆ’ ಎಂದು ಟ್ರಸ್ಟ್ ಪರ ವಕೀಲ ಅ.ಮ.ಭಾಸ್ಕರ್ ಮಾಹಿತಿ ನೀಡಿದ್ದಾರೆ.

ಏನಿದು ವಿವಾದಿತ ಸ್ಥಳ?

ಹಲೀಂ ಸಾದಿಯಾ ಶೈಕ್ಷಣಿಕ ಸಂಸ್ಥೆ ಮತ್ತು ಮಸ್ಜಿದ್-ಎ-ಸಿದ್ದಿಖಿ ಅಕ್ಬರ್ ಟ್ರಸ್ಟ್ ವಿವಾದಿತ ಸ್ಥಳವನ್ನು ಖರೀದಿಸಿ ಮಸೀದಿ ಮತ್ತು ಮದರಸಾ ನಡೆಸಲು ಮುಂದಾಗಿತ್ತು. ಕಟ್ಟಡ ನಿರ್ಮಾಣ ವೇಳೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. 2016ರಲ್ಲಿ ಮಸೀದಿ ಆರಂಭಕ್ಕೆ ವಿರೋಧಿಸಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಹತ್ಯೆ ನಡೆಯಿತು. ಹೀಗಾಗಿ ಮೈಸೂರಿನಲ್ಲಿ ಶಾಂತಿ, ಸುವ್ಯವಸ್ಥೆಗೆ ಭಂಗವಾಗುವ ಹಿನ್ನೆಲೆಯಲ್ಲಿ ಮಸೀದಿಗೆ ಬೀಗ ಹಾಕಲಾಗಿತ್ತು. ಕೆಲ ತಿಂಗಳ ಬಳಿಕ ಟ್ರಸ್ಟ್‌ನ ಸದಸ್ಯರು ಹಲವು ಬಾರಿ ಮಸೀದಿ ಬೀಗ ತೆರವಿಗೆ ಮನವಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಕೂಡ ಸಭೆ ನಡೆಸಿ, ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಕಾನೂನು ಸುವ್ಯವಸ್ಥೆ ಭಂಗವಾಗಲಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜಿಲ್ಲಾಡಳಿತ ಮನವರಿಕೆ ಮಾಡಿಕೊಟ್ಟಿತ್ತು. ಆದರೆ, ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದಷ್ಟು ಬೇಗ ಎರಡೂ ಸಮುದಾಯಗಳ ಮುಖಂಡರ ಸಭೆ ನಡೆಸಿ ವರದಿ ಸಲ್ಲಿಸಿ ಎಂದು ಸೂಚನೆ ನೀಡಿದ್ದರು. ಎರಡು ಕೋಮಿನ ಮುಖಂಡರ ಸಭೆ ಕರೆದು ಮನವಿ ಆಲಿಸಿದ ಜಿಲ್ಲಾಧಿಕಾರಿ, ಅಂತಿಮವಾಗಿ ಟ್ರಸ್ಟ್‌ನ ಸದಸ್ಯರ ಮನವಿ ಮೇರೆಗೆ ಮದರಸಾ ತೆರೆಯಲು ಅನುಮತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net