

ವಿಜಯವಾಣಿ ಸುದ್ದಿಜಾಲ ಉಡುಪಿ
ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಗೇಟ್ಗಳಲ್ಲಿ ಹೆಚ್ಚುವರಿ ಹಣ ಕಡಿತ ಮಾಡಿ ಅನ್ಯಾಯ ಮಾಡುತ್ತಿರುವ ಕುರಿತು ನಡೆಸಿದ್ದ ಹೋರಾಟಕ್ಕೆ ಹೈಕೋರ್ಟ್ ತಾತ್ಕಾಲಿಕ ಪರಿಹಾರ ನೀಡಿದೆ ಎಂದು ಕರಾವಳಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ತಿಳಿಸಿದ್ದಾರೆ.
7,500ರಿಂದ 12 ಸಾವಿರ ಕೆಜಿ ತೂಕದ ಬಸ್ಗಳು ಟೋಲ್ ಗೇಟ್ಗಳಿಂದ ಫಾಸ್ಟ್ಯಾಗ್ ಬಳಸಿ ತೆರಳುವಾಗ ಟೋಲ್ ಶುಲ್ಕವು ಖಾತೆಯಿಂದ ಕಡಿತ ಆಗುತ್ತಿತ್ತು. ಆದರೆ, ನಂತರದ ದಿನಗಳಲ್ಲಿ ಮತ್ತಷ್ಟು ಹೆಚ್ಚುವರಿ ಹಣವನ್ನು ಬಸ್ ಮಾಲೀಕರ ಖಾತೆಯಿಂದ ಕಡಿತ ಮಾಡಲಾಗುತ್ತಿತ್ತು. ಈ ಅನ್ಯಾಯದ ವಿರುದ್ಧ ಹಲವು ಬಾರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ.
ಟೋಲ್ಗೇಟ್ಗಳಿಂದ ಅನಗತ್ಯವಾಗಿ ಲಕ್ಷಾಂತರ ರೂ. ಹಣ ಕಳೆದುಕೊಳ್ಳುವ ಸ್ಥಿತಿ ಬಂದಿದ್ದರಿಂದ ಸಂಘವು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರೂ ಸ್ಪಷ್ಟ ಪರಿಹಾರ ಲಭಿಸಿರಲಿಲ್ಲ. ಹೀಗಾಗಿ ಸಂಘವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಈ ವಿಚಾರವಾಗಿ ಪ್ರಕರಣ ದಾಖಲಿಸಿ, ನ್ಯಾಯ ನೀಡುವಂತೆ ವಿನಂತಿಸಿತ್ತು.
2025ರ ಏ.25ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು 'ವಾಹನಗಳು ಟೋಲ್ ಗೇಟ್ ಪಾಸಾದ ತತ್ಕ್ಷಣದಲ್ಲಿಯೇ ಫಾಸ್ಟ್ಯಾಗ್ ಮುಖಾಂತರ ಟೋಲ್ ಶುಲ್ಕ ಕಡಿತ ಆಗಬೇಕು. ಬಳಿಕ ಅಕ್ರಮವಾಗಿ ಹೆಚ್ಚುವರಿ ಹಣ ಕಡಿತಗೊಳಿಸಲು ಅವಕಾಶವಿಲ್ಲ' ಎಂದು ತಾತ್ಕಾಲಿಕ ಆದೇಶ ನೀಡಿದೆ. ಈ ತಾತ್ಕಾಲಿಕ ಪರಿಹಾರದಿಂದ ಕರಾವಳಿಯ ಸಾರಿಗೆ ಉದ್ಯಮಿಗಳು ಟೋಲ್ ಗೇಟ್ನವರ ಅವ್ಯವಸ್ಥೆಯಿಂದ ನಿರಂತರ ವಂಚನೆಗೆ ಒಳಗಾಗುವುದು ತಪ್ಪಿದಂತಾಗಿದೆ ಎಂದು ರಾಘವೇಂದ್ರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.