ಬೆಳ್ತಂಗಡಿ: ನಾಲ್ಕು ವರ್ಷದ ಹಿಂದೆ ಇಳಂತಿಲ ಗ್ರಾಮ ಪಂಚಾಯಿತಿಯ ನಾಲ್ಕನೇ ವಾರ್ಡ್ಗೆ ನಡೆದ ಚುನಾವಣೆಯ ಮರು ಮತಎಣಿಕೆ ನಡೆಸುವಂತೆ ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಚುನಾವಣೆಯಲ್ಲಿ ಯು.ಕೆ.ಇಸುಬು 2 ಮತಗಳ ಅಂತರದಲ್ಲಿ ವಿಜೇತರಾಗಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ನಾರಾಯಣ ಭಟ್ ಎಂಬುವರು ಬೆಳ್ತಂಗಡಿಯ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ನಾರಾಯಣ ಭಟ್ ನ್ಯಾಯಾಧೀಶರ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿ ಮತಪತ್ರಗಳನ್ನು ಮರುಎಣಿಕೆ ನಡೆಸುವಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿ ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.19ರಂದು 3 ಗಂಟೆಗೆ ನ್ಯಾಯಾಲಯದಲ್ಲಿ ಮತಗಳ ಮರುಎಣಿಕೆ ನಡೆಸುವಂತೆ ಅಂದು ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗುರುಪ್ರಸಾದ್ ಅವರಿಗೆ ನ.30ರಂದು ನೀಡಿದ ಮಧ್ಯಂತರ ಆದೇಶದಲ್ಲಿ ನಿರ್ದೇಶನ ನೀಡಿದ್ದರು. ಈ ಆದೇಶವನ್ನು ರದ್ದುಗೊಳಿಸುವಂತೆ ವಿಜೇತ ಅಭ್ಯರ್ಥಿಯು.ಕೆ.ಇಸುಬು ಹೈಕೋರ್ಟ್ ಮೊರೆ ಹೋಗಿದ್ದರು. ಡಿ.17ರಂದು ಹೈಕೋರ್ಟ್ ಬೆಳ್ತಂಗಡಿಯ ನ್ಯಾಯಾಲಯ ನ.30ರಂದು ನೀಡಿದ್ದ ಮಧ್ಯಂತರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.