

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭ ಸಲ್ಲಿಕೆಯಾಗಿದ್ದ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸೇರಿದಂತೆ ಆರು ಮಂದಿಯನ್ನು ಖುಲಾಸೆಗೊಳಿಸಿದ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ತೀರ್ಪಿಗೆ, ಕೇರಳ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಮಂಜೇಶ್ವರ ವಿಧಾನಸಭಾ ಚುನಾವಣೆ ಸಂದರ್ಭ ತಮ್ಮ ಮೇಲೆ ಸಲ್ಲಿಕೆಯಾಗಿದ್ದ ಲಂಚ ಪ್ರಕರಣ ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿವಾದಿ ಕೆ.ಸುರೇಂದ್ರನ್ ಹಾಗೂ ಇತರರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್, ಮುಖಂಡರಾದ ವಿ.ಬಾಲಕೃಷ್ಣ ಶೆಟ್ಟಿ, ಸುನೀಲ್ ನಾಯ್ಕ, ಮಣಿಕಂಠ ರೈ, ವೈ.ಸುರೇಶ್ ಹಾಗೂ ಲೋಕೇಶ್ ನೋಂಡ ಎಂಬುವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಹೈಕೋರ್ಟಿಗೆ ರಿವಿಶನ್ ಪಿಟಿಶನ್ ಸಲ್ಲಿಸಿ, ಕೆಳ ನ್ಯಾಯಾಲಯದ ತೀರ್ಪು ರದ್ದುಪಡಿಸುವಂತೆ ಕೋರಿತ್ತು. ಅರ್ಜಿ ಪರಿಗಣಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ.ಬಾಬು ತೀರ್ಪಿಗೆ ತಡೆಯಾಜ್ಞೆ ನೀಡಿ, ಮುಂದಿನ ವಿಚಾರಣೆಯನ್ನು ನ.8ಕ್ಕೆ ಮುಂದೂಡಿದ್ದಾರೆ.
ಎಡರಂಗ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ವಿ.ರಮೇಶನ್ ಎಂಬುವರು ನೀಡಿದ ದೂರಿಗೆ ನಂತರ ಸುಂದರ ಅವರನ್ನು ಕೇಸಿನಲ್ಲಿ ಸೇರ್ಪಡೆಗೊಳಿಸಿ, ಗೂಢಾಲೋಚನೆ ನಡೆಸಲಾಗಿದೆ. ಸಿಪಿಎಂ, ಕಾಂಗ್ರೆಸ್, ಮುಸ್ಲಿಂ ಲೀಗ್ ಮುಖಂಡರೂ ಗೂಢಾಲೋಚನೆಯಲ್ಲಿ ಶಾಮೀಲಾಗಿದ್ದಾರೆ. ನನ್ನನ್ನು ಹಾಗೂ ಬಿಜೆಪಿಯನ್ನು ಚುನಾವಣೆಯಲ್ಲಿ ಪರಾಭವಗೊಳಿಸಲು ಈ ಎಲ್ಲ ಪಕ್ಷಗಳೂ ಪಿತೂರಿ ನಡೆಸಿರುವುದಾಗಿಯೂ ಸುರೇಂದ್ರನ್ ಆರೋಪಿಸಿದ್ದರು.