

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯುತ್ ಅಪಘಾತಕ್ಕೆ ಸಿಲುಕಿ ಬಲಗೈ ಕಳೆದುಕೊಂಡು ಶಾಶ್ವತ ಅಂಗವಿಕಲತೆಗೊಳಗಾಗಿದ್ದ 9 ವರ್ಷದ ಬಾಲಕನಿಗೆ ಧಾರವಾಡ ಹೈಕೋರ್ಟ್ ಪೀಠ, ರಾಜಿ ಸಂಧಾನದ ಮೂಲಕ ಜೆಸ್ಕಾಂಗೆ 40 ಲಕ್ಷ ರೂಪಾಯಿ ಪರಿಹಾರ ಕೊಡಿಸಲು ನಿರ್ದೇಶಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ ಎಸ್. ಕಿಣಗಿ ಹಾಗೂ ಉಮೇಶ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ 2023ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ವಿಲೇವಾರಿ ಮಾಡಿದೆ.
ಬಳ್ಳಾರಿಯ ಮೆಹಫೂಸ್ ಶಾವಲಿ ಎಂಬ 9 ವರ್ಷದ ಬಾಲಕ 2011ರ ಅ. 10ರಂದು ತನ್ನ ಅರಿವೆಗೆ ಬಾರದೆ ವಿದ್ಯುತ್ ಅಪಘಾತಕ್ಕೆ ಸಿಲುಕಿ ಸುಟ್ಟ ಗಾಯಗಳಿಂದ ಬಲಗೈ ಕಳೆದುಕೊಂಡಿದ್ದ. ಚಿಕಿತ್ಸಾ ವೆಚ್ಚ ಮತ್ತು ಪರಿಹಾರ ಕೋರಿ ಬಾಲಕನ ತಂದೆ ಎಂ. ಹಾಜಿಅಲಿ ಬಳ್ಳಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಘಟನೆಯ ತೀವ್ರತೆಯನ್ನು ಗಮನಿಸಿದ ನ್ಯಾಯಾಧೀಶರು ಚಿಕಿತ್ಸಾ ವೆಚ್ಚ ಮತ್ತು ಪರಿಹಾರ ನೀಡುವಂತೆ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ (ಜೆಸ್ಕಾಂ) ನಿರ್ದೇಶಿಸಿ ತೀರ್ಪು ನೀಡಿದ್ದರು.
ಇದನ್ನು ಪ್ರಶ್ನಿಸಿದ್ದ ಜೆಸ್ಕಾಂ, ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಘಟನೆಯ ಸೂಕ್ಷ÷್ಮತೆಯನ್ನು ಗಮನಿಸಿದ ನ್ಯಾಯಮೂರ್ತಿಗಳು, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮತ್ತು ಅವರ ವಕೀಲ ಚಂದ್ರಶೇಖರ ಹಿರೇಮಠ ಹಾಗೂ ಬಾಲಕನ ಪರ ವಕೀಲ ಬಿ.ಎಸ್. ಸಂಗಟಿ ಅವರಿಗೆ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಸೂಚಿಸಿದ್ದರು.
ಅದರಂತೆ ನಿಗಮವು ತನ್ನ ಸದಸ್ಯ ಮಂಡಳಿಯ ಸಭೆ ಕರೆದು ಕೆಲ ನಿರ್ಣಯಗಳನ್ನು ಅಂಗೀಕರಿಸಿತ್ತು. ಬಾಲಕನಿಗೆ ಆದ ತೊಂದರೆಗಾಗಿ 40 ಲಕ್ಷ ರೂಪಾಯಿ ಪಾವತಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲು ಸದಸ್ಯ ಮಂಡಳಿ ಅನುಮೋದನೆ ನೀಡಿತ್ತು. ನಿಗಮದ ನಿರ್ಣಯವನ್ನು ವಿಭಾಗೀಯ ಪೀಠದ ಗಮನಕ್ಕೆ ತರಲಾಯಿತು. ಸಂತ್ರಸ್ತ ಬಾಲಕನಿಗೆ 40 ಲಕ್ಷ ರೂ. ಪರಿಹಾರಕ್ಕೆ ಒಪ್ಪುವ ಮೂಲಕ ಪ್ರಕರಣವನ್ನು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.