ಎಲ್ಲರೂ ಶಸ್ತ್ರಾಸ್ತ್ರ ಒಪ್ಪಿಸಬೇಕಿಲ್ಲ ಎಂದ ಹೈಕೋರ್ಟ್

Published on


ಪುತ್ತೂರು: ಚುನಾವಣೆಯ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನು ಠಾಣೆಗೆ ಒಪ್ಪಿಸುವ ವಿಚಾರದಲ್ಲಿ 9 ಮಂದಿಯ 5 ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೊರ್ಟ್ ನ್ಯಾಯಮೂರ್ತಿಗಳಾದ ಸಚಿನ್ ಶಂಕರ್ ಮಗದುಮ್, ಜಿಲ್ಲಾಧಿಕಾರಿಗಳು ಶಸಾಸಗಳನ್ನು ಎಲ್ಲರೂ ಒಪ್ಪಿಸಬೇಕೆಂದು ಆದೇಶ ಮಾಡಿದ್ದು ತಪ್ಪು ಎಂದು ತೀರ್ಪು ನೀಡಿದ್ದಾರೆ.

ಪ್ರತೀ ಬಾರಿ ಠಾಣೆಗೆ ಶಸ್ತ್ರಾಸ್ತ್ರ ಒಪ್ಪಿಸುವುದರಿಂದ ಮುಕ್ತಿ ನೀಡುವ ಹೈಕೋರ್ಟ್‌ನ ಈ ತೀರ್ಪು ಐತಿಹಾಸಿಕ. ಪರವಾನಗಿ ನೀಡುವ ಸಂದರ್ಭದಲ್ಲೇ ಸೂಕ್ತ ತನಿಖೆ ನಡೆಸಿ ಯೋಗ್ಯರಿಗೆ ಮಾತ್ರ ನೀಡಬೇಕು. ಅರ್ಹತೆ ಮತ್ತು ಅವಶ್ಯಕತೆಯನ್ನು ಪರಿಗಣಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಯೂ, ಪರವಾನಗಿ ನೀಡುವ ಉದ್ದೇಶವೂ ವ್ಯತಿರಿಕ್ತವಾಗಿದೆ. ಕ್ರಿಮಿನಲ್ ಹಿನ್ನಲೆಯವರನ್ನು ಗುರುತಿಸಿ ಅವರಿಗೆ ಮಾತ್ರ ಶಸಾಸ ಇಡುವ ಆದೇಶ ಮಾಡುವುದು ಬಿಟ್ಟು, ವ್ಯಾಪಕವಾಗಿ ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳು ಕೋರ್ಟ್ ಆದೇಶಗಳ ಪ್ರಕಾರ ನಡೆದುಕೊಂಡಿಲ್ಲ ಎಂದು ಹೈಕೋರ್ಟ್ ಹೇಳಿದೆ.


ಠೇವಣಾತಿಯ ವಿಚಾರದಲ್ಲಿ ಜಿಲ್ಲಾ ಸ್ಕ್ರೀನಿಂಗ್ ಸಮಿತಿಯಲ್ಲಿ ಅರ್ಜಿ ಪುರಸ್ಕಾರವಾಗದ ಹಿನ್ನೆಲೆಯಲ್ಲಿ ಕೃಷಿಗೆ ಸಮಸ್ಯೆಯಾಗುವ ಬಗ್ಗೆ ಬಂಟ್ವಾಳ ತಾಲೂಕಿನ ಎಂ.ಗೋವಿಂದ ಭಟ್, ನಿಶಾಂತ ನಾರಾಯಣ, ಸುದರ್ಶನ್ ಕುಮಾರ್ ಮುಳಿಯ, ಎ.ಮೋಹನ ಮೈರ, ಎನ್. ವಶಿಷ್ಠ ಭಟ್, ಎಂ.ಕೃಷ್ಣ ರಾಜ್, ಗಿರಿಜಶಂಕರ್ ಕೆ, ಸುಳ್ಯ ತಾಲೂಕಿನಿಂದ ಪುರುಷೋತ್ತಮ ಗೌಡ, ಜಯಪ್ರಸಾದ್ ಸೇರಿ ಒಟ್ಟು 5 ದಾವೆಯನ್ನು ಹಾಕಿದ್ದರು. ವಕೀಲರಾದ ಸುಬ್ರಹ್ಮಣ್ಯ ಭಟ್ ಎಂ., ರವಿಶಂಕರ ಶಾಸ್ತ್ರಿ ಜಿ, ಕೆ.ರವಿಶಂಕರ್, ಕೆ. ಶ್ರೀಹರಿ ಕೃಷಿಕರ ಸಮಸ್ಯೆಯ ಬಗ್ಗೆ ಹೈಕೋರ್ಟ್‌ನಲ್ಲಿ ಗಮನ ಸೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net