

ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆ ಹೆಸರಲ್ಲಿ ಮಹದೇವಪುರ ವಲಯದ ತೂಬರಹಳ್ಳಿ ಹಾಗೂ ಕುಂದಲಹಳ್ಳಿ ವ್ಯಾಪ್ತಿಯ ಜೋಪಡಿಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ, ನೆಲೆ ಕಳೆದುಕೊಂಡ ವಲಸೆ ಕಾರ್ವಿುಕರಿಗೆ ಮರುವಸತಿ ಕಲ್ಪಿಸಲು ತಿಂಗಳೊಳಗೆ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್- ಕರ್ನಾಟಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ, ಸರ್ಕಾರಕ್ಕೆ ಈ ನಿರ್ದೇಶನ ನೀಡಿತು. 15 ದಿನಗಳ ಒಳಗೆ ತಾತ್ಕಾಲಿಕ ಪರಿಹಾರ ಯೋಜನೆ ರೂಪಿಸಿ ಸಲ್ಲಿಸುವಂತೆಯೂ ಆದೇಶಿಸಿತು.
ತನಿಖೆ ನಡೆಸದೆ ತೀರ್ವನಕ್ಕೆ ಬಂದಿದ್ದು ಹೇಗೆ?: ಮಾರತ್ಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಜ.11ರಂದು ಭೂಮಾಲೀಕರಿಗೆ ನೋಟಿಸ್ ನೀಡಿ ಅಕ್ರಮ ಬಾಂಗ್ಲಾ ವಲಸಿಗರನ್ನು ತೆರವು ಮಾಡಿ ಎಂದು ಹೇಳಿರುವುದು ಮೇಲ್ನೋಟಕ್ಕೆ ತಪು್ಪ ಎಂದೆನಿಸುತ್ತಿದೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಸ್ಥಳ ಪರಿಶೀಲನೆ ನಡೆಸದೆ, ತನಿಖೆ ನಡೆಸದೆ ಅಷ್ಟು ದೊಡ್ಡ ಸಂಖ್ಯೆಯ ಜನರನ್ನು ಅಕ್ರಮವಾಸಿಗಳು ಎಂಬ ತೀರ್ವನಕ್ಕೆ ಪೊಲೀಸರು ಹೇಗೆ ಬಂದರು ಎಂದು ಪ್ರಶ್ನಿಸಿತು.
ವಲಸೆ ಕಾರ್ವಿುಕರನ್ನು ತಾವು ತೆರವುಗೊಳಿಸಿಲ್ಲ ಎಂದು ಬಿಬಿಎಂಪಿ ಹಾಗೂ ಸರ್ಕಾರ ಹೇಳುತ್ತಿವೆ. ಅದನ್ನೂ ಸಹ ಒಪ್ಪಲಾಗದು. ಅರ್ಜಿದಾರರ ವಕೀಲರು ಸಲ್ಲಿಸಿರುವ ಜಂಟಿ ಮೆಮೋದಲ್ಲಿ ಪೊಲೀಸರೇ ಖುದ್ದು ನಿಂತು ಬಲವಂತವಾಗಿ ತೆರವುಗೊಳಿಸುತ್ತಿರುವುದನ್ನು ಫೋಟೋಸಹಿತ ವಿವರಿಸಿದ್ದಾರೆ.
ಇದು ಪೊಲೀಸರಿಂದ ಆಗಿರುವ ತಪು್ಪ. ಸ್ಥಳ ಪರಿಶೀಲನೆ ನಡೆಸದೆ, ತನಿಖೆ ಮಾಡದೆ ಅಕ್ರಮವಾಸಿಗಳು ಎಂಬ ತೀರ್ವನಕ್ಕೆ ಬಂದಿರುವ ಪೊಲೀಸರ ಕ್ರಮ ಸರಿಯಲ್ಲ. ಆದ್ದರಿಂದ ಸರ್ಕಾರವೇ ಪರಿಹಾರ ಮತ್ತು ಮರುವಸತಿ ಕಲ್ಪಿಸಿಕೊಡಬೇಕು ಎಂದು ನ್ಯಾಯಪೀಠ ಆದೇಶಿಸಿತು.
ಮೂಲಭೂತ ಹಕ್ಕುಗಳ ಉಲ್ಲಂಘನೆ: ಜೋಪಡಿಗಳನ್ನು ತೆರವುಗೊಳಿಸುವಾಗ ನಿಯಮಗಳನ್ನು ಪಾಲನೆ ಮಾಡದಿರುವುದು ಕಂಡುಬಂದಿದೆ. ಸೂರು ಹೊಂದುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ನಿಯಮಬಾಹಿರವಾಗಿ ಜೋಪಡಿ ತೆರವು ಮಾಡಿರುವುದು ವಲಸಿಗರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದಂತೆ ನ್ಯಾಯಪೀಠ ಅಭಿಪ್ರಾಯಪಟ್ಟಿತು. 1 ತಿಂಗಳಲ್ಲಿ ನಿರಾಶ್ರಿತರಿಗೆ ಸಮಗ್ರ ಪ್ಯಾಕೇಜ್ ನೀಡುವ ಯೋಜನೆ ರೂಪಿಸಬೇಕು ಮತ್ತು 15 ದಿನಗಳಲ್ಲಿ ಮಧ್ಯಂತರ ಪರಿಹಾರದ ಯೋಜನೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಫೆ.26ಕ್ಕೆ ಮುಂದೂಡಿತು.
ಮಾರತ್ಹಳ್ಳಿ ಇನ್ಸ್ಪೆಕ್ಟರ್ ಅಮಾನತು
ಪ್ರಕರಣದಲ್ಲಿ ನಿಯಮ ಪಾಲನೆ ಮಾಡದೆ, ಏಕಾಏಕಿ ವಲಸೆ ಕುಟುಂಬಗಳನ್ನು ಅಕ್ರಮ ಬಾಂಗ್ಲಾ ವಾಸಿಗಳೆಂದು ತೆರವು ಮಾಡಿಸಿದ್ದರೆಂಬ ಕಾರಣಕ್ಕೆ ಮಾರತ್ಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಬಿ.ಪಿ. ಗಿರೀಶ್ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸರ್ಕಾರಿ ವಕೀಲರು ಹೈಕೋರ್ಟ್ಗೆ ಮಾಹಿತಿ ನೀಡಿದರು.