

ಬೆಂಗಳೂರು :ಬೆಂಗಳೂರಿನ ಜೆ.ಪಿ.ನಗರ ಐದನೇ ಹಂತದಲ್ಲಿರುವ ಆಭರಣ ಟೈಮ್‌ಲೆಸ್ ಜ್ಯುವೆಲರ್ಸ್ ಮಳಿಗೆಯ ಸ್ಥಿರಾಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕಾನೂನು ಬಾಹಿರ ಕಟ್ಟಡ ನಿರ್ಮಾಣದ ಬಗೆಗಿನ ದೂರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್ ನಿರ್ದೇಶನ ನೀಡಿದೆ. ಅಕ್ರಮ ಕಟ್ಟಡ ನಿರ್ಮಾಣ ಪ್ರಶ್ನಿಸಿ ಆನೇಕಲ್‌ನ ನಾರಾಯಣ ಸ್ವಾಮಿ ಲೇಔಟ್ ನಿವಾಸಿಯಾದ ಧನುಷ್ ಮತ್ತು ಸಹಕಾರ ನಗರದ ಭರತ್ ಕಾಮತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಕಟ್ಟಡದ ಮಾಲೀಕರು ಮತ್ತು ಇತರರಿಗೆ ವಿಚಾರಣೆಗೆ ಅವಕಾಶ ನೀಡಿದ ನಂತರ ಕಾನೂನಿನ ಪ್ರಕಾರ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿವಾದಿ ಜಿಬಿಎಗೆ ತಾಕೀತು ಮಾಡಿದೆ. ವಿಚಾರಣೆ ವೇಳೆ ಜಿಬಿಎ ಪರ ವಕೀಲರು, ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿ, ಆಸ್ತಿಯಲ್ಲಿ ಕೆಲವು ಅಕ್ರಮ ನಿರ್ಮಾಣಗಳು ನಡೆದಿರುವುದು ಕಂಡುಬಂದಿದೆ ಎಂದು ವಿವರಿಸಿ ಕೆಲವು ದಾಖಲೆಗಳನ್ನು ಸಲ್ಲಿಸಿದ್ದರು. ಇದನ್ನು ಪರಿಗಣಿಸಿರುವ ಪೀಠವು ಅರ್ಜಿಗೆ ಸಂಬಂಧಿಸಿದಂತೆ ವಿವಾದಿತ ಕಟ್ಟಡದ ಜಾಗದಲ್ಲಿ ಯಾವುದಾದರೂ ಅಕ್ರಮ ನಿರ್ಮಾಣ ನಡೆದಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದು, ಈ ಕುರಿತಂತೆ ಮುಂದಿನ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದನ್ನು ಜಿಬಿಎ ವಿವೇಚನೆಗೆ ಬಿಡಲಾಗಿದೆ ಎಂದಿದೆ.
ಜೆ.ಪಿ. ನಗರದ ಐದನೇ ಹಂತದ 15ನೇ ತಿರುವಿನ ಪಿಐಡಿ (ಗುರುತಿಸಲಾದ ಆಸ್ತಿ) ಸಂಖ್ಯೆ:57/1909ರಲ್ಲಿ ಇರುವ ಸುಮಾರು 3,500 ಚದರ ಅಡಿ ನೆಲ ಅಂತಸ್ತಿನ ಜಾಗವನ್ನು, ಅದರ ಮಾಲೀಕ ಭರತ್ ಕಾಮತ್ ತಮ್ಮ ಸಂಬಂಧಿಯೂ ಆದ ಪ್ರತಾಪ್ ಕಾಮತ್ ಅವರಿಗೆ 2021ರಲ್ಲಿ 21 ವರ್ಷಗಳ ಅವಧಿಗೆ ಕರಾರಿನ ಅಡಿಯಲ್ಲಿ ಗುತ್ತಿಗೆ ನೀಡಿದ್ದರು.ಈ ಜಾಗದಲ್ಲಿ ಇತ್ತೀಚೆಗೆ ಪ್ರತಾಪ್ ಕಾಮತ್, ನನ್ನ ಮತ್ತು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕಾನೂನು ಬಾಹಿರವಾಗಿ ನೆಲ ಅಂತಸ್ತು ಹೊರತುಪಡಿಸಿ ಮೊದಲ ಮತ್ತು ಎರಡನೇ ಅಂತಸ್ತನ್ನು ನಿರ್ಮಾಣ ಮಾಡಿದ್ದಾರೆ. ಅಕ್ರಮ ಕಟ್ಟಡದ ನಿರ್ಮಾಣದ ಆರಂಭದಲ್ಲೇ ಜಿಬಿಎಗೆ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭರತ್ ಕಾಮತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ವೇಳೆ ಏಕಸದಸ್ಯ ಪೀಠವು ಸ್ಥಳದ ಮಹಜರು ವರದಿ ಕೇಳಿತ್ತು. ಇದರ ಅನುಸಾರ ಜಿಬಿಎ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಇದನ್ನು ಉಲ್ಲೇಖಿಸಿದ್ದ ಅರ್ಜಿದಾರರು ಹೈಕೋರ್ಟ್ ನಿರ್ದೇಶನದ ಅನುಸಾರ ಈ ಜಾಗದ ಮಹಜರು ನಡೆಸಿ ಸ್ಥಳದಲ್ಲಿ ಶೇ. 100ರಷ್ಟು ಅತಿಕ್ರಮ ಇರುವುದು ಕಂಡು ಬಂದಿದೆ. ಸದ್ಯ ಈ ಕಟ್ಟಡದಲ್ಲಿ ಆಭರಣ ಜ್ಯುವೆಲರ್ಸ್ ಮಳಿಗೆಯನ್ನು ಆರಂಭಿಸಲಾಗಿದೆ ಎಂದು ವಿವರಿಸಿದ್ದರು.