

ಸಿಂಧನೂರು: ಕಲಬುರಗಿ ಮತ್ತು ಧಾರವಾಡ ಹೈಕೋರ್ಟ್ ಪೀಠದ ಹಿರಿಯ ವಕೀಲ ಹಾಗೂ ರಾಜ್ಯ ಬೇಡ ಜಂಗಮ ಸಮಾಜ ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ ಮುಂದಾಳತ್ವದಲ್ಲಿ ಬೇಡ ಜಂಗಮದ ಬಗ್ಗೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಜಂಗಮ ಸಮಾಜದ ಸಂಘಟನಾ ಕಾರ್ಯದರ್ಶಿ ರವಿ ಹಿರೇಮಠ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್ಸಿ ಮೀಸಲು ವಿಚಾರಕ್ಕೆ ಸಂಬಂಧಿಸಿ ಬೇಡ ಜಂಗಮ ಸಮಾಜ ಕುರಿತು ಬೀದರ್ ರವೀಂದ್ರ ಸ್ವಾಮಿ ಸಲ್ಲಿಸಿದ ಅರ್ಜಿ ವಿಚಾರಣೆಯಲ್ಲಿ ಹೈಕೋರ್ಟ್ ನೀಡಿದ ತೀರ್ಪು ಕುರಿತು ಬೇಡ ಜಂಗಮ ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ತೀರ್ಪು ವ್ಯಕ್ತಿಗತ ವಿಚಾರಕ್ಕೆ ಸೀಮಿತವಾಗಿದ್ದು, ಸಮಗ್ರ ಸಮಾಜದ ಮಾನ್ಯತೆಯ ಕುರಿತು ನೀಡಿದ ತೀರ್ಪು ಅಲ್ಲ.
ಜಂಗಮ ಸಮುದಾಯದ ಕುಲ ಕಸುಬಿನ ಅಡಿ ಬರುವ ಬೇಡ ಜಂಗಮ ಜಾತಿಯ ಮೂಲ, ಹುಟ್ಟು, ಗುರುತು, ಪ್ರದೇಶ, ಸಂವಿಧಾನಾತ್ಮಕ ಬೆಂಬಲದ ಬಗ್ಗೆ ಅರಿವಿಲ್ಲದ ಕೆಲವರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದೇ ಗೊಂದಲಗಳಿಗೆ ಕಾರಣ.
ಸ್ವಾತಂತ್ರ್ಯ ಪೂರ್ವದ ನಿಜಾಮ್ ಪ್ರಾಂತ್ಯದಲ್ಲಿನ ಜಂಗಮರು ವರ್ಷವಿಡೀ ನಡೆಸಿಕೊಂಡು ಬರುವ ಧಾರ್ಮಿಕ ಕಾರ್ಯಗಳಿಗೆ ಫಲವಾಗಿ ವರ್ಷಕ್ಕೊಮ್ಮೆ ಜನರು ನೀಡುವ ಧಾನ್ಯಗಳನ್ನು ದೇಣಿಗೆಯಾಗಿ ಪಡೆಯುತ್ತಿದ್ದರು. ಇದಕ್ಕೆ ಬೇಡ ಎಂಬ ಅರ್ಥವಿದ್ದು, ಇದನ್ನೇ ಕಾಯಕ ಮಾಡಿಕೊಂಡವರಿಗೆ ಬೇಡ ಜಂಗಮರು ಎನ್ನಲಾಗುತ್ತಿತ್ತು ಎಂದು ಬಿ.ಡಿ.ಹಿರೇಮಠ ವಿವರಿಸಿದ್ದಾರೆ.
ಚಾರಿತ್ರಿಕ ದಾಖಲೆಗಳಿದ್ದರೂ ಎಸ್ಸಿ ಮೀಸಲು ದುರ್ಬಳಕೆ ಎಂದು ತಪ್ಪು ಮಾಹಿತಿ ಹಬ್ಬಿಸುತ್ತಿರುವುದು ಖಂಡನೀಯ ಎಂದು ದೂರಿದ್ದಾರೆ.