ಸಾಲ ಮಾಡ್ತೀರೋ ಕಳ್ಳತನ ಮಾಡ್ತೀರೋ ಸೌಕರ್ಯ ಒದಗಿಸಿ; ಬೆಂಗ್ಳೂರಿನ ಹದಗೆಟ್ಟ ರಸ್ತೆಗಳ ವ್ಯವಸ್ಥೆಗೆ ಹೈಕೋರ್ಟ್ ಗರಂ

Highcourt
Published on

ಬೆಂಗಳೂರು: ‘ಸಾಲ ಮಾಡುತ್ತೀರೋ ಅಥವಾ ಕಳ್ಳತನ ಮಾಡುತ್ತೀರೋ, ಜನರಿಗೆ ಮೂಲ ಸೌಕರ್ಯ ಒದಗಿಸುವುದು ನಿಮ್ಮ ಕರ್ತವ್ಯ....! ಅಂತಾರಾಷ್ಟ್ರೀಯ ನಗರಿ ಎಂದು ಗುರುತಿಸಿಕೊಳ್ಳುತ್ತಿರುವ ಬೆಂಗಳೂರಿನ ಹದಗೆಟ್ಟ ರಸ್ತೆಗಳ ಅವ್ಯವಸ್ಥೆಯನ್ನು ಕಂಡು ಬಿಬಿಎಂಪಿಗೆ ಹೈಕೋರ್ಟ್ ತಾಕೀತು ಮಾಡಿದ್ದು ಹೀಗೆ. ರಸ್ತೆಗಳ ದುರಸ್ತಿ ಕಾಮಗಾರಿ ಆದಷ್ಟು ಬೇಗ ಆರಂಭಿಸುವಂತೆಯೂ ಚಾಟಿ ಬೀಸಿದೆ. ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಿಬಿಎಂಪಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸಲು ಸಾರ್ವಜನಿಕರು, ವಾಹನ ಸವಾರರು ಪರದಾಡುತ್ತಿದ್ದಾರೆ. ಗುಂಡಿಗಳಿಗೆ ಬಿದ್ದು ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಅನಾಹುತಗಳಾಗುತ್ತಿದ್ದರೂ ಸಹ ಮೈಮರೆತಿರುವ ಬಿಬಿಎಂಪಿಗೆ ಹೈಕೋರ್ಟ್, ಜವಾಬ್ದಾರಿಯನ್ನು ನೆನಪು ಮಾಡಿದೆ.

ನಗರದ ದಾಸರಹಳ್ಳಿ ವಲಯದ ವಾರ್ಡ್​ಗಳಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಲು ಪಾಲಿಕೆಗೆ ನಿರ್ದೇಶಿಸುವಂತೆ ಕೋರಿ ವಕೀಲ ಅಶ್ವತ್ಥ್ ನಾರಾಯಣ ಚೌಧರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಅತೃಪ್ತಿ ವ್ಯಕ್ತಪಡಿಸಿತು.

ನಿಜಕ್ಕೂ ಇಲ್ಲಿ ರಸ್ತೆಗಳು ಇವೆಯೇ?: ಅರ್ಜಿದಾರರು ಅರ್ಜಿಯೊಂದಿಗೆ ಒದಗಿಸಲಾಗಿದ್ದ ಫೋಟೋಗಳನ್ನು ಗಮನಿಸಿದ ಪೀಠ, ಇಲ್ಲಿ ನಿಜಕ್ಕೂ ರಸ್ತೆಗಳು ಅಸ್ತಿತ್ವದಲ್ಲಿವೆಯೇ ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿತು. ಬಿಬಿಎಂಪಿ ಪರ ವಕೀಲರು, ಸದ್ಯ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಭಾರಿ ಮಳೆಯ ಕಾರಣದಿಂದ ರಸ್ತೆಗಳು ಹಾಳಾಗಿವೆ. ಮಳೆ ಕಡಿಮೆಯಾದ ನಂತರ ರಸ್ತೆ ದುರಸ್ತಿ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದರು.

ಆಗ ನ್ಯಾಯಪೀಠ, ನಗರದಲ್ಲಿ ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆಗೆ ಕಾಲಮಿತಿ ನಿಗದಿಪಡಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿತು. ಪಾಲಿಕೆ ಪರ ವಕೀಲರು, ಬಿಬಿಎಂಪಿ ನಡೆಸುವ ಕಾಮಗಾರಿಗಳಿಗೆ ಸರ್ಕಾರದಿಂದ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗುತ್ತದೆ. ಆದ್ದರಿಂದ, ಕಾಲಮಿತಿ ನಿಗದಿಪಡಿಸುವುದು ಕಷ್ಟವಾಗುತ್ತದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಮಳೆಯ ನಂತರ ಬೆಂಗಳೂರಿನ ರಸ್ತೆಗಳು ಮತ್ತಷ್ಟು ಹಾಳಾಗಿವೆ. ನೀವು ಎಲ್ಲಿಂದ ಹಣ ತರುತ್ತೀರಿ, ಹೇಗೆ ತರುತ್ತೀರಿ ಎನ್ನುವುದು ನಮಗೆ ಬೇಕಿಲ್ಲ. ಸಾಲ ಮಾಡಿ ಅಥವಾ ಕಳ್ಳತನ ಮಾಡಿ. ಜನರಿಗೆ ಮೂಲಸೌಕರ್ಯ ಒದಗಿಸುವುದು ನಿಮ್ಮ ಕರ್ತವ್ಯವಾಗಿದೆ. ಅದನ್ನು ನೀವು ನಿಭಾಯಿಸಲೇಬೇಕು. ಆದ್ದರಿಂದ, ಶೀಘ್ರ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಬೇಕು ಎಂದು ಬಿಬಿಎಂಪಿಗೆ ತಾಕೀತು ಮಾಡಿತು. ಅರ್ಜಿಯ ಮುಂದಿನ ವಿಚಾರಣೆ ವೇಳೆಗೆ ಕಾಮಗಾರಿಯ ಪ್ರಗತಿ ವರದಿ ಸಲ್ಲಿಸಬೇಕು ಎಂದು ಪಾಲಿಕೆಗೆ ನಿರ್ದೇಶಿಸಿ, ವಿಚಾರಣೆಯನ್ನು ಜ.5ಕ್ಕೆ ಮುಂದೂಡಿತು.

ಬಿಡುಗಡೆಯಾಗದ ಅನುದಾನ: ಅರ್ಜಿ ಸಂಬಂಧ ಹೈಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದ್ದ ಪಾಲಿಕೆ, ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿ ದಾಸರಹಳ್ಳಿ ವಲಯವೂ ಇದ್ದು, ವಿವಿಧ ಕಾಮಗಾರಿಗಳಿಗಾಗಿ 405.96 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಸರ್ಕಾರದಿಂದ ಸರ್ಕಾರದಿಂದ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ತಿಳಿಸಿತ್ತು. ಅದನ್ನು ಪರಿಶೀಲಿಸಿದ್ದ ಪೀಠ, ಪಾಲಿಕೆ ಸಲ್ಲಿಸಿರುವ ಮನವಿ ಪರಿಗಣಿಸಿ ಮುಂದಿನ ಒಂದು ತಿಂಗಳ ಒಳಗೆ 110.75 ಕೋಟಿ ರೂ. ಹಾಗೂ ಎರಡು ತಿಂಗಳ ಒಳಗೆ 405.96 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಕಳೆದ ಜೂ.24ರಂದು ನಿರ್ದೇಶಿಸಿತ್ತು. ಆದರೆ, ಹಣ ಬಿಡುಗಡೆಯಾಗಿರುವ ಬಗ್ಗೆ ಸರ್ಕಾರ ಅಥವಾ ಪಾಲಿಕೆಯಿಂದ ಹೈಕೋರ್ಟ್​ಗೆ ಈವರೆಗೂ ಯಾವುದೇ ಮಾಹಿತಿ ನೀಡಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net