

ಬೆಳಗಾವಿ: ಕೋರ್ ಕಮಿಟಿ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ. ಸಭೆ ನಂತರ ಉಸ್ತುವಾರಿ ಅರುಣ ಸಿಂಗ್ ಹಾಗೂ ಸಿಎಂ ಯಡಿಯೂರಪ್ಪ ಚರ್ಚೆ ಮಾಡಿದ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಶನಿವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಉಸ್ತುವಾರಿ, ರಾಷ್ಟ್ರೀಯ ನಾಯಕರು ಮತ್ತು ಸಿಎಂ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು. ಗ್ರಾಪಂ ಚುನಾವಣೆ ತಯಾರಿ ಹಾಗೂ ಪ್ರತಿ ಜಿಲ್ಲೆಯ ಒಬ್ಬರಿಗೆ ಉಸ್ತುವಾರಿ ನೀಡುವುದು, ಉಪಚುನಾವಣೆ ತಯಾರಿ, ಉಸ್ತುವಾರಿ, ಗೆಲುವಿನ ತಂತ್ರಗಾರಿಕೆ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ ಕರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅನಗತ್ಯ ಬಂದ್ ಕರೆ ನೀಡುವುದು ತಪ್ಪು. ಹೋರಾಟಗಾರರ ಬಗ್ಗೆ ನಮಗೆ ಗೌರವವಿದೆ. ಕನ್ನಡ ಭಾಷೆಗೆ ಮೊದಲ ಆದ್ಯತೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ತಪ್ಪಲ್ಲ. ಮರಾಠ ಸಮುದಾಯವರು ವರ್ಷಗಳಿಂದ ಇಲ್ಲೇ ಇದ್ದಾರೆ. ಅವರಿಗಾಗಿ ಪ್ರಾಧಿಕಾರ ಸ್ಥಾಪಿಸಿರುವುದು ತಪ್ಪಲ್ಲ ಎಂದು ಸಚಿವ ಜೋಶಿ ಸಮರ್ಥಿಸಿಕೊಂಡರು.