ಯುವ ನಾಯಕತ್ವಕ್ಕೆ ಹೈಕಮಾಂಡ್ ಆದ್ಯತೆ

Pralhad Joshi
Published on

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿರುವುದು ಸೂಕ್ತ ನಿರ್ಧಾರ. ಯುವ ನಾಯಕತ್ವಕ್ಕೆ ನಮ್ಮ ರಾಷ್ಟ್ರೀಯ ನಾಯಕರು ಆದ್ಯತೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಹಾಗೂ ಬಿ.ಎಸ್. ಯಡಿಯ್ಪೂರಪ ಅವರ ನೇತೃತ್ವದಲ್ಲಿ ನಾವು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಜನಪರ ಕೆಲಸಗಳಿಂದ 25ಕ್ಕೂ ಹೆಚ್ಚು ಸಂಸದರನ್ನು ರಾಜ್ಯದಿಂದ ಗೆಲ್ಲಿಸುತ್ತೇವೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದು ನಮ್ಮ ಅಪೇಕ್ಷೆ ಎಂದರು.

ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಪ್ರಬಲ ನಾಯಕರಷ್ಟೇ ಅಲ್ಲ, ಎಲ್ಲ ಸಮುದಾಯದವರಿಗೂ ಅವರು ನಾಯಕರು. ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿರುವುದು ಕುಟುಂಬ ರಾಜಕಾರಣವಲ್ಲ. ನೆಹರು ನಂತರ ಬಂದವರು, ಮುಲಾಯಂಸಿಂಗ್ ಯಾದವ್ ಅವರ ಕುಟುಂಬದವರು ರಾಜಕಾರಣಕ್ಕೆ ಬರುತ್ತಿದ್ದಾರೆ. ಇದು ಕುಟುಂಬ ರಾಜಕಾರಣ. ಕಾಂಗ್ರೆಸ್​ನವರು ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೂರು ವರ್ಷ ಎಐಸಿಸಿಗೆ ಅಧ್ಯಕ್ಷರನ್ನೇ ನೇಮಕ ಮಾಡಿರಲಿಲ್ಲ ಎಂದು ಕುಟುಕಿದರು.

ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸದೇ ವಿದ್ಯುತ್ ಬಿಲ್ ಕೊಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಗೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡುತ್ತಿಲ್ಲ. ಅವರೆಲ್ಲ ಅಸಮಾಧಾನಗೊಂಡಿದ್ದಾರೆ. ರಾಜ್ಯದಲ್ಲಿ ಬಿಟ್ಟಿ ಗ್ಯಾರಂಟಿ ಸ್ಕೀಂ ಹೆಸರಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ಜನರ ಹಿತ ಮರೆತು, ಸಿಎಂ ಹಾಗೂ ಡಿಸಿಎಂ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನಾವು ಸರ್ಕಾರವನ್ನು ಅಸ್ಥಿರಗೊಳಿಸುತ್ತಿಲ್ಲ. ಪಂಚರಾಜ್ಯ ಚುನಾವಣೆ ನಂತರ ಕೋರ್ ಕಮಿಟಿ ಮೀಟಿಂಗ್ ಕರೆದು ನಮ್ಮ ಶಾಸಕರಿಗೆ ಸರ್ಕಾರ ಬೀಳುತ್ತದೆ ಎಂದು ಮಾತನಾಡದಂತೆ ಹೇಳುತ್ತೇವೆ. ನಮ್ಮದೇ ತಪ್ಪುಗಳಿಂದ ರಾಜ್ಯದಲ್ಲಿ ಜನರು ಕಾಂಗ್ರೆಸ್​ಗೆ ಅಧಿಕಾರ ಕೊಟ್ಟಿದ್ದಾರೆ. ಅವರು ಉತ್ತಮ ಆಡಳಿತ ನೀಡುವುದನ್ನು ಬಿಟ್ಟು, ವೈಫಲ್ಯಗಳನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net