ಜಾತಿಗಣತಿ ಮರು ಸಮೀಕ್ಷೆ ನಡೆಸಲು ಹೈಕಮಾಂಡ್​ ಸೂಚನೆ

ravanna
Published on

ಮಾಗಡಿ: ಜಾತಿಗಣತಿ ಕುರಿತು ಮರು ಸಮೀೆ ನಡೆಸಲು ಹೈಕಮಾಂಡ್​ ಸೂಚಿಸಿರುವುದರಿಂದ ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರಿಗೆ ನೋವಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ ತಿಳಿಸಿದರು.

ತಾಲೂಕಿನ ಹೊನ್ನಾಪುರ ಬಳಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಜಾತಿಗಣತಿ 1931ರಿಂದ ನಡೆದಿಲ್ಲ. ಮೊದಲನೇ ಬಾರಿ ಸಿದ್ದರಾಮಯ್ಯ ಅವರು 180 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ಮಾಡಿಸಿದ್ದಾರೆ. ಅಧಿಕಾರಿಗಳು ಮನೆ ಮನೆಗೆ ತೆರಳಿ ಶೇ. 98 ಸರ್ವೇ ನಡೆಸಿದ್ದಾರೆ.

ಇದಕ್ಕೆ ಎಚ್​.ಡಿ.ಕುಮಾರಸ್ವಾಮಿ ಒಪ್ಪಿಗೆ ನೀಡಲಿಲ್ಲ. ಸಿದ್ದರಾಮಯ್ಯ ಕ್ಯಾಬಿನೆಟ್​ನಲ್ಲಿ ಕ್ರಮಕೈಗೊಂಡು ಬೇರೆ ಬೇರೆ ಒತ್ತಡಗಳಿಂದ ಹಿಂದಕ್ಕೆ ಹಾಕಿದ್ದಾರೆ. ಹೈಕಮಾಂಡ್​ ಮರು ಸಮೀಕ್ಷೆಗೆ ಏಕೆ ತೀರ್ಮಾನ ಕೈಗೊಂಡಿದೆ ಗೊತ್ತಿಲ್ಲ. ಈ ಬಗ್ಗೆ ಚರ್ಚೆಮಾಡಿ ಮುಂದೆ ಏನು ಮಾಡಬೇಕು ಎಂದು ಕ್ರಮಕೈಗೊಳ್ಳಲಾಗುವುದು ಎಂದರು.

ಆರ್​ಸಿಬಿ ಸಂಸ್ಥೆ ಖಾಸಗಿ ಸಂಸ್ಥೆಯಾಗಿದ್ದು, ಸಂಭ್ರಮಾಚರಣೆ ವೇಳೆ ಆಯೋಜಿಸಿದ್ದ ಸಮಯ, ಕೈಗೊಂಡ ನಿರ್ಧಾರದಿಂದ 11 ಮಂದಿ ಆಮಾಯಕರು ಮೃತಪಟ್ಟಿದ್ದಾರೆ. ಅವರ ತಪ್ಪಿಗೆ ಸರ್ಕಾರದ ಮೇಲೆ ವಿರೋಧ ಪಕ್ಷಗಳು ಆರೋಪಿಸುವುದು ಯಾವ ನ್ಯಾಯ ಎಂದರು.

ವಿಧಾನಸೌಧದ ಬಳಿ ಸರ್ಕಾರಿ ಕಾರ್ಯಕ್ರಮ ಅಚ್ಚುಗಟ್ಟಾಗಿ ನಡೆದಿದೆ. ಅಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮೊದಲು ಮೆರವಣಿಗೆಗೆ ಬಂದೋಬಸ್ತ್​ ಮಾಡಲು ಸಾಧ್ಯವಿಲ್ಲ ಎಂದಾಗ ಸರ್ಕಾರದ ಧೋರಣೆ ಸರಿಯಿಲ್ಲ ಎಂದು ಬಿಜೆಪಿ ಟ್ವಿಟ್​ ಮಾಡಿ ಆರೋಪಿಸುವುದು ಎಷ್ಟು ಸರಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net