

ಮೈಸೂರು: ನವೆಂಬರ್ ಕ್ರಾಂತಿಯ ಬಗ್ಗೆ ನನಗೆ ಗೊತ್ತಿಲ್ಲ. ತಂದೆಯವರು ನನಗೆ ಕೊಟ್ಟಿರುವ ಮಾಹಿತಿ ಪ್ರಕಾರ ಹೈಕಮಾಂಡ್ ಆಗಲಿ, ಬೇರೆ ನಾಯಕರಾಗಲಿ ಯಾರು ಸಹ ನವೆಂಬರ್‌ಆದ ನಂತರ ಅಧಿಕಾರ ಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೇಳಿಲ್ಲ. ಹೀಗಾಗಿ ಇವರೆಲ್ಲ ಯಾವ ಕ್ರಾಂತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾನಾಡಿದ ಅವರು, 5 ವರ್ಷ ಪೂರ್ತಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಈಗಿನ ಪರಿಸ್ಥಿತಿ ನೋಡಿದರೆ ನಮ್ಮ ತಂದೆಯೇ 5 ವರ್ಷವೂ ಸಿಎಂ ಆಗಿ ಇರುತ್ತಾರೆ. ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲ ಇದೆ. ಇಲ್ಲ ಅಂದಿದ್ದರೆ ಶಾಸಕರು ಸುಮ್ಮನೆ ಇರುತ್ತಿದ್ದರಾ? ಹೈಕಮಾಂಡ್ ಬಳಿಗೆ ಹೋಗಿ ದೂರು ಕೊಡುತ್ತಿದ್ದರು. ಶಾಸಕರ ಬೆಂಬಲ ಇರುವುದ ರಿಂದಲೇ ಅವರು ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ ಎಂದರು.
ಸಂಪುಟ ಪುನಾರಚನೆ ಕುರಿತು ತಂದೆಯವರೊಂದಿಗೆ ಮಾತನಾಡಿಲ.್ಲ ಡಿಸೆಂಬರ್‌ನಲ್ಲಿ ಸಂಪುಟ ಪುನಾರಚನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ತಂದೆ ಸಿಎಂ ಆಗಿರುವ ತನಕ ನನ್ನನ್ನು ಮಂತ್ರಿ ಮಾಡೋದಿಲ್ಲ ಎಂದು ಹೇಳಿದ್ದಾರೆ. ನಾನು ಕೂಡ ಅದನ್ನೇ ಹೇಳಿದ್ದೇನೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಸರಿಯಾಗಿದೆ. ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕು. ಆದರೆ, ಆರ್‌ಎಸ್‌ಎಸ್‌ಗೆ ಮಾತ್ರ ಅನುಮತಿಯ ಅವಶ್ಯಕತೆ ಏತಕ್ಕೆ ಇಲ್ಲ? ಇಡೀ ದೇಶಕ್ಕೆ ಒಂದು ಕಾನೂನು, ಆರ್‌ಎಸ್‌ಎಸ್‌ಗೆ ಒಂದು ಕಾನೂನು ಏತಕ್ಕೆ? ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದೆ. ಆರ್‌ಎಸ್‌ಎಸ್ ಸಾಂಸ್ಕೃತಿಕ ಸಂಘಟನೆಯಲ್ಲ, ಅದೊಂದು ರಾಜಕೀಯ ಸಂಸ್ಥೆ. ಶಾಲಾ ಕಾಲೇಜುಗಳಲ್ಲಿ ಒಂದು ಅಜೆಂಡಾ ಇಟ್ಟುಕೊಂಡು ಕೆಲಸ ಮಾಡಲು ಆರ್‌ಎಸ್‌ಎಸ್‌ಗೆ ಅವಕಾಶ ಮಾಡಿಕೊಡಬಾರದು. ಈಗಾಗಲೇ ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ನಡೆಸಲು ನಿಯಮಗಳು ಜಾರಿಯಲ್ಲಿವೆ. ನಾವು ಯಾರ ಹಕ್ಕುಗಳನ್ನು ಕಿತ್ತುಕೊಂಡಿಲ್ಲ. ನಿಯಮಗಳನ್ನು ಪಾಲನೆ ಮಾಡಿ, ಕಾರ್ಯಕ್ರಮ ಮಾಡಲಿ. ತಮಿಳುನಾಡಿನಲ್ಲಿರುವ ನಿಯಮಗಳನ್ನು ರಾಜ್ಯದಲ್ಲೂ ಜಾರಿಗೆ ತರಲಾಗುವುದು ಎಂದರು.
ಆರ್‌ಎಸ್‌ಎಸ್ ನಿಷೇಧವಾಗಿದ್ದ ಸಂಸ್ಥೆ. ಈ ಬಗ್ಗೆ ಇತಿಹಾಸವೇ ಇದೆ. ನಾವು ಆ ಸಂಸ್ಥೆಯನ್ನು ನಿಷೇಧ ಮಾಡಲು ಹೊರಟಿಲ್ಲ. ಸಾರ್ವಜನಿಕ ಸ್ಥಳ ಹಾಗೂ ಶಾಲಾ ಕಾಲೇಜುಗಳಲ್ಲಿ ಅನುಮತಿ ಪಡೆಯದೆ ಕಾರ್ಯಕ್ರಮ ನಡೆಸಬಾರದು ಅಷ್ಟೆ. ಆರ್‌ಎಸ್‌ಎಸ್‌ನವರು ನಾವು ಒಳ್ಳೆಯವರು ಎಂದು ತೋರಿಸಿಕೊಳ್ಳುತ್ತಾರೆ. ಆದರೆ ಅವರು ಮಾಡೋದೆಲ್ಲ ಅನಾಚಾರ. ಈ ಸಿದ್ಧಾಂತದಿಂದ ಪ್ರಭಾವಕ್ಕೆ ಒಳಗಾದವರೇ ಗಾಂಧೀಜಿಯನ್ನು ಕೊಂದಿದ್ದು. ಅಂತಹವರೇ ಕೆಟ್ಟ ಭಾಷೆಯನ್ನು ಒಬ್ಬ ಸಚಿವರಿಗೆ ಬಳಸುತ್ತಾರೆ. ಆರ್‌ಎಸ್‌ಎಸ್ ತಂತ್ರಗಾರಿಕೆಯೇ ಹಾಗೆ. ಜನರನ್ನು ಸೇರಿಸಿ ತಪ್ಪು ಕೆಲಸಗಳನ್ನು ಅವರಿಂದ ಮಾಡಿಸಿ ಅವರು ನಮ್ಮವರಲ್ಲ ಎಂದು ಹೇಳುವುದು. ಆರ್‌ಎಸ್‌ಎಸ್ ನೋಂದಣಿಯಾಗದೆ ಇರುವ ಸಂಸ್ಥೆಯಾಗಿದ್ದು, ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರು ಅಭಿವೃದ್ಧಿ ದೊಡ್ಡ ಸವಾಲಾಗಿದೆ. ಒಳ್ಳೆಯ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಇದು ನಿರಂತರವಾದ ಪ್ರಕ್ರಿಯೆ. ಐಟಿ ವ್ಯಕ್ತಿಗಳ ಟ್ವೀಟ್‌ಅನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 5 ಸಾವಿರ ಗುಂಡಿಗಳನ್ನು ಮುಚ್ಚಿರುವ ಬಗ್ಗೆ ಹೇಳಿದ್ದಾರೆ. ಸರ್ಕಾರ ತನ್ನ ಕೆಲಸವನ್ನು ಮಾಡುತ್ತಿದೆ. ಕೈಗಾರಿಕಾಕೋದ್ಯಮಿಗಳು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿ. ಆದರೆ ಕೆಲವು ಹಿಪೋಕ್ರೇಟ್ಸ್‌ಗಳು ಬಿಜೆಪಿ ಸರ್ಕಾರ ಏನು ತಪ್ಪು ಮಾಡಿದರೂ ಕಣ್ಮುಚ್ಚಿ ಕುಳಿತುಕೊಂಡಿರುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರದ ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
‘ಯತೀಂದ್ರ ಸಿದ್ದರಾಮಯ್ಯ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ’ ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಅವರ ಪಕ್ಷದದವರೇ ಗಂಭೀರವಾಗಿ ತೆಗೆದುಕೊಂಡಿಲ್ಲ. ದಾರಿಯಲ್ಲಿ ಹೋಗುವವರೆಲ್ಲ ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಾನು ರಾಜಕೀಯದಲ್ಲಿದ್ದೇನೆ ಎಂದು ತೋರಿಸಿಕೊಳ್ಳಲು ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸರ್ಕಾರದ ನಿಯಮ ಪ್ರಕಾರವೇ ನಡೆಯುತ್ತಿದೆ. ಕೆಲವೊಮ್ಮೆ ಶಾಸಕರನ್ನು ಕೇಳಿಯೂ ವರ್ಗಾವಣೆ ಮಾಡುತ್ತಾರೆ ಎಂದರು.