ಶಾಸಕ ಯತ್ನಾಳ-ನಿರಾಣಿಗೆ ಹೈಕಮಾಂಡ್ ಬುಲಾವ್ ?

Nirani
Published on

ವಿಜಯಪುರ: ಪರಸ್ಪರ ವಾಕ್ಸಮರ, ಪರ-ವಿರೋಧ ಘೋಷಣೆ, ತುಂಬಿದ ಸಭೆಯಲ್ಲಿಯೇ ಪರೋಕ್ಷ ಟೀಕೆ-ಟಿಪ್ಪಣೆ ಹಾಗೂ ಬೆಂಬಲಿಗರ ಮೂಲಕ ದಾಂಧಲೆ ನಡೆಸಿದ ಬಿಜೆಪಿಯ ಉಭಯ ನಾಯಕರಿಗೆ ಹೈಕಮಾಂಡ್‌ನಿಂದ ಬುಲಾವ್ ಬಂದಿತಾ?

ಸದ್ಯ ಅವಳಿ ಜಿಲ್ಲಾ ರಾಜಕಾರಣದಲ್ಲಿ ಇಂಥದ್ದೊಂದು ಚರ್ಚೆ ನಡೆದಿದ್ದು, ಉಭಯ ನಾಯಕರ ಪೈಕಿ ಒಬ್ಬರಿಗೆ ನೋಟಿಸ್ ನೀಡಿರುವ ವಿಚಾರವೂ ಕೇಳಿ ಬಂದಿದೆ. ಅಂದಹಾಗೆ ಆ ನಾಯಕರು ಯಾರು? ಯಾರಿಗೆ ಬುಲಾವ್ ಬಂದಿದೆ? ಮತ್ತಿನ್ನಾರಿಗೆ ನೋಟಿಸ್ ನೀಡಲಾಗಿದೆ ಎಂಬುದು ಸದ್ಯಕ್ಕೆ ಕುತೂಹಲ ಹೆಚ್ಚಿಸಿದೆ.

ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನಡುವಿನ ಸಮರ ತಾರಕಕ್ಕೇರುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್ ಉಭಯನಾಯಕರಿಗೆ ರಾಜಧಾನಿಗೆ ಬರುವಂತೆ ಸಂದೇಶ ರವಾನಿಸಲಾಗಿದೆ ಎಂಬ ಸಂಗತ ಪಕ್ಷದ ಉನ್ನತ ಮೂಲಗಳಿಂದ ಬಹಿರಂಗಗೊಂಡಿದೆ. ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಹೈಕಮಾಂಡ್ ಉಭಯ ನಾಯಕರಿಗೂ ತಿಳಿಹೇಳಲು ಸಜ್ಜಾದಂತಿದೆ.

ಏನಿದು ಪ್ರಕರಣ?

ಪ್ರಧಾನಿ ನರೇಂದ್ರ ಮೋದಿ ಆಡಳಿತದ 9 ವರ್ಷಗಳ ಸಾಧನೆ ಬಿಂಬಿಸುವ ಕಾರ್ಯಕರ್ತರ ಸಮಾವೇಶವನ್ನು ಶಾಸಕ ಯತ್ನಾಳ ಹಾಗೂ ನಿರಾಣಿ ವೈಯಕ್ತಿಕ ಟೀಕೆ ಟಿಪ್ಪಣೆಗಳಿಗೆ ವೇದಿಕೆಯಾಗಿಸಿಕೊಂಡಿದ್ದರು. ಪರಿಸ್ಥಿತಿ ಎಷ್ಟರ ಮಟ್ಟಿಗೆ ಮುಂದುವರಿಯಿತೆಂದರೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿಯೇ ದಾಂಧಲೆ ನಡೆದು ಕಾರ್ಯಕ್ರಮದ ಉದ್ಘಾಟನೆಯೇ ನೆರವೇರಿಸದೆ ಅಂತ್ಯಗೊಳಿಸಬೇಕಾಯಿತು. ಅಷ್ಟಕ್ಕೆ ಈ ಸಮರ ನಿಲ್ಲಲಿಲ್ಲ. ಮರುದಿನವೂ ಮಾಜಿ ಸಚಿವ ಮುರುಗೇಶ ನಿರಾಣಿ ಸುದ್ದಿಗೋಷ್ಠಿ ನಡೆಸಿ ಖಡಕ್ ಸಂದೇಶ ರವಾನಿಸಿದರು. ಪರಿಸ್ಥಿತಿ ಕೈಮೀರುವ ಹಂತವನ್ನು ಅರಿತ ಹೈಕಮಾಂಡ್ ಉಭಯ ನಾಯಕರಿಗೆ ರಾಜಧಾನಿಗೆ ಬರುವಂತೆ ಸಂದೇಶ ರವಾನಿಸಿದೆ ಎಂದು ಮುಖಂಡರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

ನೋಟಿಸ್ ಜಾರಿ?

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರಿಗೆ ನೋಟಿಸ್ ನೀಡಲಾಗಿದೆ ಎಂಬ ಸಂಗತಿಯೂ ಕೇಳಿ ಬಂದಿದ್ದು ಆ ಬಗ್ಗೆ ಸ್ಪಷ್ಟತೆ ಇಲ್ಲ. ಇಬ್ಬರೂ ಹಿರಿಯ ನಾಯಕರಾದ್ದರಿಂದ ಜಿಲ್ಲಾ ನಾಯಕರ ಮೂಲಕ ನೀಡಲಾಗದೆ ನೇರವಾಗಿ ತಲುಪಿಸಿದರೂ ತಲುಪಿಸಿರಬಹುದೆಂಬುದು ಕೆಲವರ ಲೆಕ್ಕಾಚಾರ. ಅದೇನೇ ಇರಲಿ ಹೈಕಮಾಂಡ್ ಮಾತ್ರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿಗೊಳಿಸುವಲ್ಲಿ ಹೆಣಗಾಡುತ್ತಿದೆ. ಇನ್ನೊಂದೆಡೆ ಮುಂಗಾರು ಕೈ ಕೊಟ್ಟಿದ್ದರಿಂದ ಬರ ಆವರಿಸುತ್ತಿದೆ. ಮಗದೊಂದೆಡೆ ಲೋಕಸಭೆ ಚುನಾವಣೆಗೆ ಬಿಜೆಪಿ ಅಣಿಯಾಗಬೇಕಿದೆ. ಇಂಥ ಸಂದರ್ಭದಲ್ಲಿ ಪರಸ್ಪರ ಕಿತ್ತಾಡಿಕೊಳ್ಳುತ್ತಿರುವುದು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂಬುದು ವರಿಷ್ಠರಿಗೆ ಮನದಟ್ಟಾಗಿದೆ. ಅದೇ ಕಾರಣಕ್ಕೆ ಇಬ್ಬರನ್ನೂ ಕರೆದು ಬುದ್ದಿ ಹೇಳಲು ಮುಂದಾಗಿದೆ ಎಂದು ನಾಯಕರೊಬ್ಬರು ಮನದಿಂಗಿತ ಹೊರಹಾಕಿದರು.

ಅವಳಿ ಜಿಲ್ಲೆಯಲ್ಲಿ ನಡೆದ ಎಲ್ಲ ವಿದ್ಯಮಾನಗಳು ಹೈಕಮಾಂಡ್ ಗಮನಕ್ಕಿದೆ. ನಮ್ಮಿಂದಲೂ ಮಾಹಿತಿ ಪಡೆದಿದ್ದು ನಿಜ. ಇಬ್ಬರಿಗೂ ಕರೆದು ಬುದ್ದಿ ಹೇಳುವುದಾಗಿ ತಿಳಿಸಿದ್ದಾರೆ. ಇದೆಲ್ಲವೂ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ನಡೆಯುವ ಸಂಗತಿಗಳು. ಹೀಗಾಗಿ ಸದ್ಯ ರಾಜಧಾನಿಗೆ ಕರೆಯಿಸಿಕೊಳ್ಳುವುದಾಗಿ ವರಿಷ್ಠರು ತಿಳಿಸಿದ್ದಾರೆ.
ಆರ್.ಎಸ್. ಪಾಟೀಲ ಕೂಚಬಾಳ, ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net