

ಬೆಳಗಾವಿ : ಜಿಲ್ಲಾ ವೆಚ್ಚ ವೀಕ್ಷಣಾ ನೋಡಲ್ ಅಧಿಕಾರಿ ಪರಶುರಾಮ ದುಡಗುಂಟಿ ಅವರು ಶನಿವಾರ ಬೆಳಗಾವಿ ಉತ್ತರ ಕ್ಷೇತ್ರ ಹಾಗೂ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ, ಅರಳಿಕಟ್ಟಿ, ಹತ್ತರಗಿ ಹಾಗೂ ಬಾಚಿ ಅಂತಾರಾಜ್ಯ ಚೆಕ್‌ಪೋಸ್ಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮತದಾನಕ್ಕೆ ಇನ್ನೇನು ನಾಲ್ಕು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ವಾಹನಗಳ ತಪಾಸಣೆ ತೀವ್ರಗೊಳಿಸುವಂತೆ ಚೆಕ್ ಪೋಸ್ಟ್ ಸಿಬ್ಬಂದಿಗೆ ನಿರ್ದೇಶಿಸಿದ ಅವರು, ತಪಾಸಣೆ ಪರಿಣಾಮಕಾರಿ ಆಗಲು ಹೆಚ್ಚುವರಿ ತಪಾಸಣಾ ಅಧಿಕಾರಿಗಳು ಮತ್ತು ಪೊಲೀಸರ ಸಂಖ್ಯೆ ಹೆಚ್ಚಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಮತದಾನ ದಿನ ಹತ್ತಿರವಾಗುತ್ತಿದ್ದಂತೆ ಅಕ್ರಮ ಹಣ ಹಾಗೂ ವಸ್ತುಗಳ ಸಾಗಾಣಿಕೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಸ್ಸು, ಕಾರು, ಜೆತೆಗೆ ಬೈಕ್ ಗಳನ್ನೂ ಸಹ ತಪ್ಪದೇ ತಪಾಸಣೆ ಮಾಡಬೇಕು ಎಂದು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ವೆಚ್ಚ ವೀಕ್ಷಣಾಧಿಕಾರಿಗಳಾದ ಶೀತಲ ಕುರಣೆ ಮತ್ತು ಮಂಜುನಾಥ ಬೀಳಗಿಕರ, ಸೇರಿದಂತೆ ಪೊಲೀಸ್ ಹಾಗೂ ಅರೆಸೇನಾ ಪಡೆಗಳ ಸಿಬ್ಬಂದಿ ಇದ್ದರು.