ಚಂಡಮಾರುತ ಇಫೆಕ್ಟ್​, ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್​: ನಾಳೆಯೂ ಕರಾವಳಿಯಲ್ಲಿ ಭಾರಿ ಮಳೆ...

cyclone
Published on

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತ ಪ್ರಭಾವದಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಶನಿವಾರ ಭಾರಿ ಮಳೆ ಸುರಿದಿದೆ. ಮಂಗಳೂರಿನಲ್ಲಿ ಅತಿ ಹೆಚ್ಚು 80 ಮಿಲಿಮೀಟರ್​ ಮಳೆಯಾಗಿದೆ. ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಇದರಿಂದ ತಡೆಗೋಡೆಗಳಿಗೆ ಹಾನಿಯಾಗಿದೆ. ತೀರಕ್ಕೆ ಹಾಕಲಾಗಿದ್ದ ದೈತ್ಯ ಕಲ್ಲುಗಳು ಸಮುದ್ರ ಪಾಲಾಗಿವೆ. ತೀರದಲ್ಲಿದ್ದ ನೂರಾರು ಮರಗಳು ಸಮುದ್ರ ಪಾಲಾಗಿವೆ.

ಕರಾವಳಿಯಲ್ಲಿ ರೆಡ್​ ಅಲರ್ಟ್​​: ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೇ 16ರಂದು ವ್ಯಾಪಕ ಮಳೆಯಾಗಲಿರುವ ಹಿನ್ನೆಲೆಯಲ್ಲಿ ರೆಡ್​ ಅಲರ್ಟ್​​ ಘೋಷಿಸಲಾಗಿದೆ. ಅಲ್ಲದೆ ಈ ಭಾಗಗಳಲ್ಲಿ ಮೇ 17ರಂದು ಆರೆಂಜ್​, 18, 19ರಂದು ಯೆಲ್ಲೋ ಅಲರ್ಟ್​​ ಇರಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಉತ್ತರ ಒಳನಾಡಿನ ಬೆಳಗಾವಿ, ಗದಗ, ಹಾವೇರಿ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮುಂದಿನ 48 ಗಂಟೆ ಆರೆಂಜ್​ ಅಲರ್ಟ್​​ ಇರಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಮುಂದಿನ 4 ದಿನ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಈಗಾಗಲೆ, ತೌಕ್ತೆ ಚಂಡಮಾರುತ ಮತ್ತಷ್ಟು ತೀವ್ರಗೊಂಡಿದ್ದು, ಗುಜರಾತ್​ ಕರಾವಳಿಯತ್ತ ಸಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net