

ಲಕ್ಷ್ಮೇಶ್ವರ: ಜೀವನದಲ್ಲಿ ಸಾಧನೆ ಮಾಡಬೇಕಾದರೆ ವಿದ್ಯಾರ್ಥಿಗಳು ಉನ್ನತ ಗುರಿ ಹೊಂದಿ ಶ್ರದ್ಧೆ, ಸತತ ಅಭ್ಯಾಸ, ಸಮಯಪ್ರಜ್ಞೆ, ಛಲ ಬೆಳೆಸಿಕೊಂಡಾಗ ಅಂದುಕೊಂಡ ಗುರಿ ಸಾಧ್ಯವಾಗುತ್ತದೆ ಎಂದು ಹಿರಿಯ ಸಾಹಿತಿ ತಿಮ್ಮಾಪುರದ ಕೆವಿಎಸ್‌ಆರ್ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿದ್ದು ಯಾಪಲಪರವಿ ಅಭಿಪ್ರಾಯಪಟ್ಟರು.
ಪಟ್ಟಣದ ಬಿಸಿಎನ್ ಸಿರಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಫ್ರೆಷರ್ಸ್ ಡೇ ಮತ್ತು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗುವುದರಿಂದ ಜೀವನ ಹಾಳಾಗುವುದರ ಜತೆಗೆ ತಂದೆ-ತಾಯಿಯ ಆಸೆಗಳನ್ನು ಸಹ ನುಚ್ಚುನೂರು ಮಾಡಿದಂತಾಗುತ್ತದೆ. ಅದಕ್ಕಾಗಿ ಉತ್ತಮ ಸಾಧನೆ ಮಾಡುವ ಗುರಿಯೊಂದಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಸಿಎನ್ ವಿದ್ಯಾಸಂಸ್ಥೆಯ ನಿರ್ದೇಶಕ ಲೋಹಿತ್ ನೆಲವಿಗಿ ಮಾತನಾಡಿ, ಪಿಯುಸಿ ಹಂತದಲ್ಲಿ ಇರುವ ವಿದ್ಯಾರ್ಥಿಗಳು ಎರಡು ವರ್ಷಗಳ ಈ ಅವಧಿಯನ್ನು ತಪಸ್ಸಿನ ರೂಪದಲ್ಲಿ ಮುಗಿಸಿದರೆ ಉತ್ತಮ ಭವಿಷ್ಯ ನಿಮ್ಮದಾಗುವದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಿರಿ ಅಕಾಡೆಮಿ ಸಿಇಒ ಕೆ.ಎಸ್. ರಾವ್, ನಿರ್ದೇಶಕಿ ಡಾ.ರೇವತಿ ನೆಲವಿಗಿ, ಪ್ರಾಚಾರ್ಯ ವಿಜಯಕುಮಾರ, ಅಜನೀಶ ಮಾನ್ವಿ, ಡಿ.ಎಂ. ಪೂಜಾರ ಇತರರಿದ್ದರು. ಉಪನ್ಯಾಸಕರಾದ ಗಿರೀಶ ರಡ್ಡಿ, ಚಂದ್ರು ಕಂಗೂರಿ, ಅಭಿಲಾಷ, ಭಾರತಿ, ನಾಗರತ್ನಾ, ಗಂಗಾ ಮರಡೂರ, ಖುಷಾ ಅರಳಿ, ಪ್ರೀತಿ, ಅಜಮೀರ, ಭಾಷಾ, ಚಂದ್ರು ಬಂಡಿವಾಡ, ಅಶೋಕ ಪೂಜಾರ, ಸುಜಾತಾ ಇತರರಿದ್ದರು. ತೇಜು, ಕಾವ್ಯಾ, ಅಕ್ಷತಾ, ಭೂಮಿಕಾ, ಚೈತ್ರಾ ನಿರೂಪಿಸಿದರು. ಕಾರ್ಯಕ್ರಮದ ನಂತರ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.