ಚುನಾವಣೆಗೆ ಹೈಟೆಕ್ ಮತ ಪ್ರಚಾರ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ರಾಜ್ಯದ ಗಮನ ಸೆಳೆದಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಚುನಾವಣಾ ಅಖಾಡ ರಂಗೇರುತ್ತಿದ್ದು, ಪ್ರಮುಖ ಅಭ್ಯರ್ಥಿಗಳು ಸಾಂಪ್ರದಾಯಿಕದೊಂದಿಗೆ ಹೈಟೆಕ್ ಮತಪ್ರಚಾರಕ್ಕೆ ಮೊರೆ ಹೋಗಿದ್ದಾರೆ.

ಕಾಲಕ್ಕೆ ತಕ್ಕಂತೆ ಎಲೆಕ್ಷನ್ ಪ್ರಚಾರವೂ ಬದಲಾಗಿದೆ. ಇದಕ್ಕೆ ಈಗ ತಂತ್ರಜ್ಞಾನದ ಹೈಟೆಕ್ ಸ್ಪರ್ಶ ದೊರೆತಿದೆ. ಈ ರೀತಿಯ ಆಧುನಿಕ ಶೈಲಿಯಿಂದ ಹೊಸತನ ಸೃಷ್ಟಿಯಾಗಿದ್ದು, ಈ ಮೂಲಕ ಮತದಾರನ್ನು ಸುಲಭವಾಗಿ ಆಕರ್ಷಿಸಲು ವಿಜ್ಞಾಪನೆ ಮಾಡಿಕೊಳ್ಳಲಾಗುತ್ತಿದೆ.


ಎಲೆಕ್ಷನ್ ಅಂದರೆ ಸಾಕು ಅಲ್ಲಿ ಬಹಿರಂಗ ಸಭೆ, ಸಮಾವೇಶ, ರ‌್ಯಾಲಿ, ಪಾದಯಾತ್ರೆ, ಮನೆ ಮನೆ ಪ್ರಚಾರ ಸಾಮಾನ್ಯ. ಇದು ಈ ಕ್ಷೇತ್ರದಲ್ಲೂ ನೋಡಲು ಸಿಗುತ್ತಿದೆ. ಇದನ್ನು ಹೊರತು ಪಡಿಸಿ ಹೈಟೆಕ್ ಪ್ರಚಾರವೂ ರಾರಾಜಿಸುತ್ತಿದೆ. ಇದು ತ್ವರಿತಗತಿಯಲ್ಲಿ ಮತ್ತು ಕಡಿಮೆ ಸಮಯದಲ್ಲಿ ಮತದಾರರನ್ನು ತಲುಪಲು ಬಳಸಿಕೊಳ್ಳಲಾಗುತ್ತಿದೆ. ಇದು ಹೆಚ್ಚು ಪರಿಣಾಮಕಾರಿಯೂ ಆಗಿದೆ.


ಪ್ರಮುಖ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಎಂ.ಲಕ್ಷ್ಮಣ್, ಮತ್ತು ಬಿಜೆಪಿಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರು ಊರು-ಕೇರಿಯನ್ನು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ನಿತ್ಯ ತಿರುಗಾಡುತ್ತಿದ್ದಾರೆ. ಆದರೆ, ಇದು ಸಾಕಾಗುತ್ತಿಲ್ಲ. ಕೊಡಗು ಜಿಲ್ಲೆಯನ್ನು ಇಡೀ ಆಗಿ ಒಳಪಟ್ಟಿರುವ ಈ ಕ್ಷೇತ್ರ ವಿಸ್ತಾರವಾಗಿದೆ.


ಮೈಸೂರು ಜಿಲ್ಲೆಯ ನರಸಿಂಹರಾಜ, ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಕೊಡಗು ಜಿಲ್ಲೆಯ ವಿರಾಜಪೇಟೆ, ಮಡಿಕೇರಿ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದೆ. ಮೈಸೂರಿನಿಂದ ಕೊಡಗು ಜಿಲ್ಲೆಯ ಶನಿವಾರಸಂತೆ ಹೋಬಳಿಯ ಕೊಡ್ಲಿಪೇಟೆ ನಡುವೆ 125 ಕಿ.ಮೀ. ದೂರ. ಇನ್ನೊಂದೆಡೆ ಮೈಸೂರಿನಿಂದ ಮಡಿಕೇರಿ ತಾಲೂಕಿನ ಪೆರಾಜೆ(ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಗ್ರಾಮ) ನಡುವೆ ಬರೋಬ್ಬರಿ 160 ಕಿ.ಮೀ. ದೂರ ಇದೆ. ಒಬ್ಬ ಅಭ್ಯರ್ಥಿ ಉಭಯ ಜಿಲ್ಲೆಗಳಲ್ಲಿರುವ ಇಂತಹ ಗಡಿಗ್ರಾಮಗಳವರೆಗೆ ತಲುಪುವುದು ಕಷ್ಟಕರ. ವಿಭಿನ್ನ ಭೌಗೋಳಿಕ ಪ್ರದೇಶದ ಹೊಂದಿರುವ ಈ ಕ್ಷೇತ್ರದಲ್ಲಿ ಎಲ್ಲೆಡೆ ಹೋಗಲು ಬಲು ತ್ರಾಸದಾಯಕ ಸಹ ಹೌದು.


ಅಲ್ಲದೆ, ಲೋಕಸಭಾ ಚುನಾವಣೆಯು ವಿಧಾನಸಭಾ ಚುನಾವಣೆಯಷ್ಟು ಸಲೀಸಲ್ಲ. ವಿಸ್ತಾರವಾದ ಭೂಪ್ರದೇಶ, ಅದಕ್ಕೆ ತಕ್ಕಂತೆ ಮತದಾರರ ಸಂಖ್ಯೆಯೂ ಹೆಚ್ಚು. 10,17,120 ಪುರುಷ, 10,55,035 ಮಹಿಳಾ, 182 ಇತರ ಮತದಾರರು ಸೇರಿದಂತೆ 20,72,337 ಮತದಾರರು ಇದ್ದಾರೆ. ಪ್ರತಿಯೊಬ್ಬ ಮತದಾರರನ್ನು ಅಭ್ಯರ್ಥಿ ನೇರವಾಗಿ ಭೇಟಿ ಮಾಡಲು, ಪ್ರತಿ ಊರಿಗೂ ಹೋಗಲು ಆಗುವುದಿಲ್ಲ. ಆದ್ದರಿಂದ ಈ ಸಮಸ್ಯೆ ನಿವಾರಣೆಗಾಗಿಯೇ ಅಭ್ಯರ್ಥಿಗಳು ತಂತ್ರಜ್ಞಾನ ಆಧಾರಿತ ಹೈಟೆಕ್ ಪ್ರಚಾರದ ಬಳಕೆಗೆ ಮುಂದಾಗಿದ್ದಾರೆ.


ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿವೆ. ಗೆಲುವಿಗಾಗಿ ವಿವಿಧ ಕಸರತ್ತು ಮಾಡುತ್ತಿವೆ. ಅದಕ್ಕಾಗಿ ಪ್ರತಿಯೊಂದು ಅವಕಾಶವನ್ನೂ ಕೈಚೆಲ್ಲುತ್ತಿಲ್ಲ. ಬದಲಿಗೆ ಸದ್ಬಳಕೆ ಮಾಡಿಕೊಳ್ಳಲು ಹಾತೊರೆಯುತ್ತಿವೆ.

ಸಿಎಂನಿಂದ ದೂರವಾಣಿ ಕರೆ:


‘ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ’, ‘ನಾನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ ಎಂಬ ಧ್ವನಿ ಮತದಾರರ ಮೊಬೈಲ್‌ನಲ್ಲಿ ರಿಂಗಣಿಸುತ್ತಿದೆ. ಖುದ್ದು ಸಿಎಂ, ಡಿಸಿಎಂ ಮತದಾರರೊಂದಿಗೆ ನೇರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಮತದಾರ ಮೊಬೈಲ್‌ಗೆ ಕರೆ ಮಾಡಲಾಗುತ್ತಿದೆ. ಆ ಕಡೆಯಿಂದ ಧ್ವನಿಮುದ್ರಿತ ಮಾತುಗಳು ಕೇಳಿಬರುತ್ತಿದೆ.

ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮತ ಚಲಾವಣೆ ಮಾಡುವಂತೆ ಉಭಯ ನಾಯಕರು ಕೇಳಿಕೊಳ್ಳುತ್ತಿದ್ದಾರೆ. ಇದುವೇ ಈ ಸಲ ವಿಶೇಷ. ಮೊದಲ ಬಾರಿಗೆ ಈ ರೀತಿಯ ಪ್ರಯೋಗವನ್ನು ಮಾಡುವ ಮೂಲಕ ಕಾಂಗ್ರೆಸ್ ಮತದಾರರಿಗೆ ಹತ್ತಿರವಾಗುತ್ತಿದೆ. ಈ ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳು ದೂರವಾಣಿ ಮೂಲಕ ಕರೆ ಮಾಡಿ ಮತಯಾಚಿಸುತ್ತಿದ್ದರು. ಈ ಸಲ ಸಿಎಂ, ಡಿಸಿಎಂ ಅಖಾಡಕ್ಕಿಳಿದುವುದು ಹೊಸದು.

ಸೋಷಿಯಲ್ ಮೀಡಿಯಾ ಬಳಕೆ:


ಸಾಮಾಜಿಕ ಜಾಲತಾಣವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್(ಟ್ವಿಟರ್) ಮತಪ್ರಚಾರಕ್ಕಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ನ ಲಕ್ಷ್ಮಣ್ ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಸಕ್ರಿಯವಾಗಿರಲಿಲ್ಲ. ಟಿಕೆಟ್ ಖಚಿತವಾಗಿ ಎರಡು ದಿನದಲ್ಲೇ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದಿದ್ದಾರೆ. ಇದರ ಮೂಲಕ ನಿತ್ಯ ನಡೆಯುವ ಮತಪ್ರಚಾರ, ಸಭೆ-ಸಮಾರಂಭಗಳು, ನಾಯಕರ ಭೇಟಿ, ಕಾರ್ಯಕರ್ತರೊಂದಿಗೆ ಸಮಾಲೋಚನೆ, ರ‌್ಯಾಲಿ.. ಹೀಗೆ ಚುನಾವಣೆಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆಗಳನ್ನು ಫೋಟೋ, ವಿಡಿಯೋ ಸಹಿತ ಅಪ್‌ಲೋಡ್ ಮಾಡಲಾಗುತ್ತಿದೆ.


ಅಂತೆಯೇ ಬಿಜೆಪಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಹ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಚುನಾವಣೆಗೂ ಮುನ್ನ ಇವರು ವೈಯಕ್ತಿಕ ಖಾತೆಯನ್ನು ಹೊಂದಿದ್ದರು. ಬಿಜೆಪಿ ಟಿಕೆಟ್ ಖಚಿತವಾದ ಬಳಿಕ ಪ್ರತ್ಯೇಕ ಖಾತೆಯನ್ನೇ ತೆರೆದಿದ್ದಾರೆ. ಈ ಮೂಲಕ ನಿತ್ಯದ ಮತ ಪ್ರಚಾರದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಲಕ್ಷ್ಮಣ್ ಮುಂಚೂಣಿಯಲ್ಲಿದ್ದಾರೆ.

ಸೋಷಿಯಲ್ ಮೀಡಿಯಾ ಪ್ರಚಾರಕ್ಕಾಗಿ ಪ್ರತ್ಯೇಕ ತಂಡ ನಿಯೋಜನೆ ಮಾಡಲಾಗಿದೆ. ಅದಕ್ಕಾಗಿ ವಾರ್ ರೂಂ ಸಹ ತೆರೆಯಲಾಗಿದೆ. ಅಭ್ಯರ್ಥಿಯ ಪ್ರವಾಸದ ವಿವರ, ಪ್ರಚಾರ ನಡೆಸಿದ ಚಿತ್ರ ಸಹಿತ ವರದಿ, ನಾಯಕರ ಭೇಟಿ, ಹೇಳಿಕೆಗಳು ಮೊದಲಾದವುಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಪೋಸ್ಟ್‌ಗಳನ್ನು ಹಾಕಲು ತಂತ್ರಜ್ಞಾನದ ಬಳಕೆಯ ಅರಿವಿರುವ ನುರಿತ ಯುವಕ-ಯುವತಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಇವರು ಬಹುತೇಕ ರಾಜಕೀಯೇತರ ವ್ಯಕ್ತಿಗಳು ಎಂಬುದು ವಿಶೇಷ.

ಹೆಚ್ಚು ಪರಿಣಾಮಕಾರಿ

ಸಾಂಪ್ರದಾಯಿಕ ಮತಪ್ರಚಾರಕ್ಕಿಂತ ಹೈಟೆಕ್ ಪ್ರಚಾರ ಹೆಚ್ಚು ಪರಿಣಾಮಕಾರಿ ಆಗಿದೆ. ಕಟ್ಟಕಡೆಯ ಮತದಾರರನ್ನೂ ಕ್ಷಣಾರ್ಧದಲ್ಲಿ ತಲುಪಲು ಅನುಕೂಲ ಮಾಡಿಕೊಡುತ್ತಿದೆ. ಸುಲಭವಾಗಿ ಮತದಾರರಿಗೆ ಗಾಳ ಹಾಕಲು ಸಾಧ್ಯವಾಗುತ್ತದೆ. ಮತ್ತೊಂದೆಡೆ, ಈ ರೀತಿಯ ಕ್ಯಾಂಪೇನ್‌ಗೆ ವೋಟರ್ ಸಹ ಮನಸೋತಿದ್ದಾರೆ.

ತಲುಪಲು ಸುಲಭದ ಮಾರ್ಗ

ಇತ್ತೀಚಿಗೆ ತಂತ್ರಜ್ಞಾನದ ಮೂಲಕ ಜಾಲತಾಣಗಳ ಬಳಕೆದಾರರ ಸಂಖ್ಯೆ ಹೆಚ್ಚು. ಪ್ರಸ್ತುತ ಬಹುತೇಕರು ಸ್ಟಾರ್ಟ್‌ಫೋನ್ ಹಾಗೂ ಇಂಟರ್‌ನೆಟ್ ಬಳಸುತ್ತಾರೆ. ಅಂತಹವರನ್ನು ತಲುಪಲು ಇದುವೇ ಸುಲಭದ ಮಾರ್ಗವಾಗಿದೆ. ಕ್ಷೇತ್ರದ ವ್ಯಾಪ್ತಿ ದೊಡ್ಡದಾಗಿರುವುದರಿಂದ ಅಭ್ಯರ್ಥಿಯು ಎಲ್ಲ ಗ್ರಾಮ, ಪಟ್ಟಣಗಳಿಗೂ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾಮಾಜಿಕ ಮಾಧ್ಯಮ ಈ ಕೊರತೆಯನ್ನು ನೀಗಿಸಿದೆ.

ಎಲೆಕ್ಷನ್ ಆರ್ಭಟ ಕಾಣುತ್ತಿಲ್ಲ


ಮೈಸೂರು ಸೇರಿದಂತೆ ಕ್ಷೇತ್ರಾದ್ಯಂತ ಸುತ್ತಾಡಿದರೆ ಎಲೆಕ್ಷನ್ ನಡೆಯುತ್ತಿದೆ ಎಂಬುದೇ ಭಾಸವಾಗುತ್ತಿಲ್ಲ. ಪಕ್ಷದ ಬಾವುಟಗಳು, ಬ್ಯಾನರ್, ಫ್ಲೆಕ್ಸ್‌ಗಳು ರಾರಾಜಿಸುತ್ತಿಲ್ಲ. ಮೈಕಾಸುರನ ಆರ್ಭಟವೂ ಕೇಳುತ್ತಿಲ್ಲ. ಹೀಗಾಗಿ, ಚುನಾವಣೆ ನಡೆಯುತ್ತಿದೆಯೋ ಇಲ್ಲವೋ ಎಂಬ ವಾತಾವರಣ ಎಲ್ಲೆಡೆ ಕಾಣ ಸಿಗುತ್ತಿದೆ. ನೀತಿ ಸಂಹಿತೆಯ ಕಟ್ಟುನಿಟ್ಟಾಗಿ ಪಾಲನೆಯಿಂದ ಇದು ಸಾಧ್ಯವಾಗಿದೆ.

ಇದರಿಂದ ಎಗ್ಗಿಲ್ಲದೆ ನಡೆಯುತ್ತಿದ್ದ ಮತಪ್ರಚಾರಕ್ಕೆ ಕಡಿವಾಣ ಬಿದ್ದಿದ್ದು, ಅನುಮತಿ ಪಡೆದು ಸಭೆ-ಸಮಾರಂಭ ಸೇರಿದಂತೆ ಎಲೆಕ್ಷನ್ ಚಟುವಟಿಕೆಗಳನ್ನು ನಡೆಸಬೇಕಿದೆ. ಇದರಿಂದ ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿ ಇಲ್ಲದಂತಾಗಿದೆ. ಆದರೆ, ಅಭ್ಯರ್ಥಿಗಳಿಗೆ ಮತದಾರರನ್ನು ತಲುಪುವುದು ಕಷ್ಟಕರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net