

ಬೆಳಗಾವಿ: ನಗರದ ನಾಥ್ ಪೈ ವೃತ್ತದಲ್ಲಿ ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಿರುವ ಹೈಟೆಕ್ ಮಾರುಕಟ್ಟೆ ಮಳಿಗೆಗಳು ಧೂಳು ತಿನ್ನುತ್ತಿದ್ದು, ಒಂದೂವರೆ ವರ್ಷ ಗತಿಸಿದರೂ ಫಲಾನುಭವಿಗಳ ಆಯ್ಕೆಯಾಗಿಲ್ಲ.
ನಾಥ್ ಪೈ ವೃತ್ತದಿಂದ ಖಾಸಭಾಗ ಬಸವೇಶ್ವರ ವೃತ್ತದ ವರೆಗೆ ಬೀದಿ ವ್ಯಾಪಾರಸ್ಥರಿಗಾಗಿ ಸ್ಮಾರ್ಟ್‌ಸಿಟಿ ಕಂಪನಿಯಿಂದ 5.45 ಕೋಟಿ ರೂ. ವೆಚ್ಚದಲ್ಲಿ 140 ಮಾರುಕಟ್ಟೆ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಉದ್ದೇಶಿತ ಯೋಜನೆ ಅಧಿಕಾರಿಗಳ ನಿಷ್ಕಾಳಜಿಯಿಂದ ಲೋಕಾರ್ಪಣೆಯಾಗಿಲ್ಲ. ಪ್ರತಿಯೊಂದು ಮಳಿಗೆಯು ತರಕಾರಿ, ಹಣ್ಣು ಇತರ ವಸ್ತುಗಳನ್ನು ಇಡಲು ಸಿಸ್ತುಬದ್ಧವಾಗಿ ಒಂದೇ ಲೈನ್‌ನಲ್ಲಿ 140 ಅಂಗಡಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ವರ್ಷ ಕಳೆದರೂ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಿದ ಹೈಟೆಕ್ ಮಳಿಗೆಗಳು ಸದ್ಭಳಕೆಯಾಗುತ್ತಿಲ್ಲ. ಸ್ಮಾರ್ಟ್‌ಸಿಟಿಯಿಂದ ಮಾರುಕಟ್ಟೆಯ ಮಳಿಗೆಗಳನ್ನು ನಿರ್ಮಿಸಿ, ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಫಲಾನುಭವಿಗಳನ್ನು ಆಯ್ಕೆ ಮಾಡುವ ಹೊಣೆ ಪಾಲಿಕೆ ಅಧಿಕಾರಿಗಳ ಮೇಲಿದೆ.
ಹೈಟೆಕ್ ಮಾರುಕಟ್ಟೆ ಮಳಿಗೆಗಳು:
ಖಾಸಬಾಗ್‌ದಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ. ತರಕಾರಿ ವ್ಯಾಪಾರಸ್ಥರು ಮಳೆಯಲ್ಲೇ ನೆನೆದುಕೊಂಡು ವ್ಯಾಪಾರ ಮಾಡುತ್ತಿದ್ದರು. ಈ ತೊಂದರೆ ನಿವಾರಿಸುವುದಕ್ಕೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹೈಟೆಕ್ ಹಾಕರ್ ಜೋನ್ ನಿರ್ಮಿಸಲಾಗಿದೆ. ಹಾಕರ್ ಜೋನ್ ಎರಡೂ ಬದಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಸಂಚಾರ ದಟ್ಟಣೆಯಾಗಬಾರದು ಎಂಬ ಉದ್ದೇಶದಿಂದ ಅಂಗಡಿಗಳ ಪಕ್ಕದಲ್ಲಿ ಪಾಥ್ ವೇ ನಿರ್ಮಿಸಲಾಗಿದೆ. ಅದರ ಪಕ್ಕದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಜತೆಗೆ ಚರಂಡಿ ಮೇಲೆ ಫುಟ್ ನಿರ್ಮಿಸಿರುವುದು ವಿಶೇಷ.
ಜನದಟ್ಟನೆ: ಹೈಟೆಕ್ ಮಾರುಕಟ್ಟೆ ಮಳಿಗೆಗಳ ಜಾಗದಲ್ಲಿ ಈ ಮೊದಲು ಖಾಸಬಾಗ ಭಾನುವಾರದ ಸಂತೆ ನಡೆಯುತ್ತಿತ್ತು. ಈಗ ಮಾರುಕಟ್ಟೆಗಳು ನಿರ್ಮಿಸಿ ಬಳಕೆಗೆ ಮುಕ್ತಗೊಳಿಸಿಲ್ಲ. ಹೀಗಾಗಿ ಇದೇ ಮಳಿಗೆಗಳ ಎದುರು ವಾರದ ಸಂತೆ ನಡೆಯುತ್ತಿದ್ದು, ಭಾರಿ ಜನದಟ್ಟನೆ ಆಗುತ್ತಿದೆ. ಪ್ರತಿದಿನವೂ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಮೇಲೆ ಮಾರುಕಟ್ಟೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಾರೆ. ಇದು ಜನೋಪಯೋಗಿ ಯೋಜನೆ ಅಲ್ಲ ಎಂದು ಕೆಲ ನಾಗರಿಕರು ದೂರುತ್ತಿದ್ದಾರೆ.
ಖಾಸಭಾಗದಲ್ಲಿ ಬೀದಿ ವ್ಯಾಪಾಸ್ಥರಿಗೆ ನಿರ್ಮಿಸಿರುವ ಮಾರುಕಟ್ಟೆ ಮಳಿಗೆಗಳನ್ನು ದಿನದ ಬಾಡಿಗೆ ಆಧಾರದಲ್ಲಿ ಕೊಡಬೇಕಾ ? ಅಥವಾ ತಿಂಗಳ ಬಾಡಿಗೆ ಆಧಾರದಲ್ಲಿ ಕೊಡಬೇಕಾ ಎನ್ನುವುದನ್ನು ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು. 10 ದಿನಗಳಲ್ಲಿ ಮಾರುಕಟ್ಟೆ ಮಳಿಗೆಗಳನ್ನು ವ್ಯಾಪಾಸ್ಥರಿಗೆ ಮುಕ್ತಗೊಳಿಸಲಾಗುವುದು ಎಂದು ಪಾಲಿಕೆ ಸದಸ್ಯ ರವಿ ಧೋತ್ರೆ ಪ್ರತಿಕ್ರಿಯಿಸಿದ್ದಾರೆ.