ತಾಯಿ ಹಾಲು ಬ್ಯಾಂಕ್ ಆರಂಭಕ್ಕೆ ಚಿಂತನೆ

dj dvg ss hospital
Published on

ದಾವಣಗೆರೆ: ಮುಂದಿನ ದಿನಗಳಲ್ಲಿ ನಗರದಲ್ಲಿ ತಾಯಿ ಹಾಲು ಬ್ಯಾಂಕ್ ಆರಂಭಿಸುವ ಚಿಂತನೆಯಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಇಲ್ಲಿನ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಬುಧವಾರ, ಜಾಗತಿಕ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನೇಕ

ಸಂದರ್ಭಗಳಲ್ಲಿ ತಾಯಿಯ ತಾಯಿ ಹಾಲು ಮಗುವಿಗೆ ಉಣಿಸಲು ಸಾಧ್ಯವಾಗದ ಸ್ಥಿತಿ ಇದ್ದಾಗ ಇದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮಗು ಹಾಗೂ ತಾಯಿಯ ಉತ್ತಮ ಆರೋಗ್ಯಕ್ಕಾಗಿ ತಾಯಿ ಹಾಲು ಸೇವನೆ ಬಹಳ ಮುಖ್ಯವಾಗಿದ್ದು, ಎಲ್ಲರೂ ಇದರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿದ್ದ ಮಹಿಳೆಯರ ಜತೆ ಸಂವಾದ ನಡೆಸಿ ಸ್ತನ್ಯ ಪಾನ ಮಹತ್ವದ ಬಗ್ಗೆ ಮಾಹಿತಿ ನೀಡಿ, ಅವರಿಗಿರುವ ಸಂದೇಹಗಳಿಗೆ ಉತ್ತರಿಸಿದರು. ಅವರ ಅನುಭವಗಳ ಕುರಿತು ಚರ್ಚೆ ನಡೆಸಿದರು.

ಮಕ್ಕಳ ತಜ್ಞ ಡಾ.ಸಿ.ಆರ್. ಬಾಣಾಪುರ ಮಠ ಮಾತನಾಡಿ ಗರ್ಭಿಣಿಯರ ಆರೈಕೆ, ಹೆರಿಗೆಯಾದ ನಂತರ ಮಕ್ಕಳು ಹಾಗೂ ತಾಯಿಯ ಬಾಂಧವ್ಯ ಬೆಳೆಯಲು ಮೊದಲು ಮಾಡಬೇಕಾದ ಕಾರ್ಯಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ, ತಾಯಿ ಮತ್ತು ಮಗುವಿನ ಆರೈಕೆ ಹಾಗೂ ಆರೋಗ್ಯವಂತ ಮಗುವಿನ ಲಾಲನೆ, ಪಾಲನೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದು ಅದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಮಗುವಿನ ಆರೋಗ್ಯಕ್ಕಾಗಿ ತಾಯಿಯ ಹಾಲು ಎಷ್ಟು ಮುಖ್ಯ ಎಂಬುದರ ಮನವರಿಕೆ ಮಾಡಿದರು.

ಪ್ರಾಚಾರ್ಯ ಡಾ.ಬಿ.ಎಸ್. ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ. ಅರುಣ್ ಕುಮಾರ್ ಅಜ್ಜಪ್ಪ, ಮಕ್ಕಳ ವಿಭಾಗದ ಡಾ.ಎನ್.ಕೆ. ಕಾಳಪ್ಪನವರ್, ಡಾ.ಜಿ.ಎಸ್. ಲತಾ ಮಾತನಾಡಿದರು.

ಬಾಪೂಜಿ ಮಕ್ಕಳ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಮೂಗನಗೌಡ ಪಾಟೀಲ್, ಡಾ.ಚಂದ್ರಶೇಖರ್ ಗೌಳಿ, ಡಾ.ಶಾಂತಲಾ ಸೇರಿ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಬಾಪೂಜಿ ಸಂಸ್ಥೆಯ ವಿವಿಧ ವಿಭಾಗಗಳ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net