ಶಿವಮೊಗ್ಗದಲ್ಲಿ ಹೈಟೆಕ್ ಗಾಂಜಾ ದಂಧೆ, ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳ ಬಂಧನ

SMG POLICE TRACE HITECH GAANJA CASE
ಶಿವಮೊಗ್ಗದಲ್ಲಿ ಹೈಟೆಕ್ ಆಗಿ ಗಾಂಜಾ ಬೆಳೆಯುತ್ತಿದ್ದ ಪ್ರಕರಣ ಬೇಧಿಸಿದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವದ ಪೊಲೀಸ್ ತಂಡ. ಅನಿಲ್‌ಕುಮಾರ್ ಭೂಮರಡ್ಡಿ, ಎಂ.ಸುರೇಶ್, ಅಭಯ್‌ಪ್ರಕಾಶ್ ಸೋಮನಾಳ್, ಟಿ.ರಮೇಶ್ ಮತ್ತಿತರರಿದ್ದರು.
Published on

ಶಿವಮೊಗ್ಗ: ಮನೆ ಬಾಡಿಗೆ ಪಡೆದು ಕೊಠಡಿಯೊಳಗೆ ತಾಪಮಾನ ನಿಯಂತ್ರಿಸಿ ಹೈಟೆಕ್ ಆಗಿ ಗಾಂಜಾ ಬೆಳೆದಿದ್ದ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆನ್‌ಲೈನ್ ಮೂಲಕ ಗಾಂಜಾ ಬೀಜ ತರಿಸಿ ಪಾಟ್‌ಗಳಲ್ಲಿ ಬೆಳೆದು ಒಣಗಿಸಿ ಸಣ್ಣ ಪ್ಯಾಕೇಟ್ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.

ಶಿವಮೊಗ್ಗದ ಇತಿಹಾಸದಲ್ಲೇ ಮೊದಲ ಬಾರಿಗೆ ಹೈಟೆಕ್ ಆಗಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದ್ದು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಜಕ್ಕಪ್ಪ ನಗರದ ವೀಘ್ನರಾಜ್(28), ಧರ್ಮಪುರಿ ಜಿಲ್ಲೆಯ ಕಡಗತ್ತೂರಿನ ಪಾಂಡಿದೊರೈ (27) ಮತ್ತು ಕೇರಳ ರಾಜ್ಯದ ಇಡ್ಡುಕ್ಕಿ ಜಿಲ್ಲೆಯ ಅಡಿಮಲಿ ಟೌನ್‌ನ ವಿನೋದ್‌ಕುಮಾರ್ (27) ಎಂಬುವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಬ್ಬಯ್ಯ ಮೆಡಿಕಲ್ ಕಾಲೇಜು ಎದುರಿನ ಶಿವಗಂಗಾ ಲೇಔಟ್‌ನಲ್ಲಿ ಬಾಡಿಗೆಗೆ ಮನೆ ಪಡೆದಿದ್ದ ಆರೋಪಿಗಳು, ಮನೆಯ ಕೊಠಡಿಯೊಂದರಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡು ವೆಬ್‌ಸೈಟ್ ಮೂಲಕ ಗಾಂಜಾ ಬೆಳೆಯುವ ಬಗ್ಗೆ ಮಾಹಿತಿ ಪಡೆದು ಆನ್‌ಲೈನ್‌ನಲ್ಲಿ ಬೀಜ, ಪಾಟ್‌ಗಳು, ಲೈಟ್‌ಗಳನ್ನು ತರಿಸಿ 8 ಅಡಿ ಎತ್ತರದ ಕೊಠಡಿಯಲ್ಲಿ ಗಾಂಜಾ ಬೆಳೆದಿದ್ದಾರೆ. ತಾಪಮಾನ ಆಧಾರಿತವಾಗಿ ಬೆಳೆದಿರುವುದು ಅಚ್ಚರಿ ಮೂಡಿಸಿದೆ. ಮೂವರು ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದು ಸ್ಥಳೀಯ ಕಾಲೇಜಿನಲ್ಲಿ ಓದುತ್ತಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಹೇಳಿದರು.
ಕಳೆದ ನಾಲ್ಕೈದು ತಿಂಗಳಿಂದ ಗಾಂಜಾ ಬೆಳೆಯುತ್ತಿದ್ದು ಹಸಿಗಳನ್ನು ಒಣಗಿಸಿ 50 ಗ್ರಾಂ, 100 ಗ್ರಾಂಗಳ ಸಣ್ಣ ಸಣ್ಣ ಪ್ಯಾಕೇಟ್ ಮಾಡಿ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ, ತಮಿಳುನಾಡು, ಕೇರಳದಲ್ಲೂ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ತನಿಖೆ ಮುಂದುವರಿದಿದೆ ಎಂದರು.
ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಉಪ ವಿಭಾಗ-ಬಿ ಡಿವೈಎಸ್ಪಿ ಎಂ.ಸುರೇಶ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಅಭಯ್‌ಪ್ರಕಾಶ್ ಸೋಮನಾಳ್, ಪಿಎಸ್‌ಐ ಟಿ.ರಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net