

ಅನ್ಸಾರ್ ಇನೋಳಿ ಉಳ್ಳಾಲ
26 ವರ್ಷಗಳ ಸುದೀರ್ಘ ಅವಧಿ ಬಳಿಕ ಸ್ವಂತ ಜಮೀನಿನಲ್ಲಿ ಅಂಗನವಾಡಿ ನಿರ್ಮಾಣವಾಗಿದೆ. ಅದೂ ಹೈಫೈ ಮಾದರಿಯಲ್ಲಿದ್ದು, ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಇಲ್ಲಿಗೆ ಬರಲು ಪುಟಾಣಿಗಳೂ ಕಾತರರಾಗಿದ್ದಾರೆ. ಇದು ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಗಂಬಿಲದಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಕಟ್ಟಡದ ಕಥೆ!
ಬಗಂಬಿಲದಲ್ಲಿ 1989ರಲ್ಲಿ ಸ್ಥಳೀಯರು ನಾಗರಿಕ ಸೇವಾ ಸಮಿತಿ ಹುಟ್ಟುಹಾಕಿದ್ದರು. ಆ ಸಮಯ ಸಂಘಟನೆಗೊಂದು ಕಟ್ಟಡ ಬೇಕೆನಿಸಿದಾಗ ದಾನಿಗಳೊಂದಿಗೆ ಯುನೆಸ್ಕೊ ಸಂಸ್ಥೆ ಕೈಜೋಡಿಸಿ 53,391 ರೂ. ದೇಣಿಗೆ ನೀಡಿತ್ತು. ಆ ದಿನಗಳಲ್ಲಿ ಇಲ್ಲಿನ ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕಾಗಿ ನಾಲ್ಕು ಕಿ.ಮೀ. ದೂರದ ದೇರಳಕಟ್ಟೆ ಅಥವಾ ಬಬ್ಬುಕಟ್ಟೆಗೆ ಹೋಗಬೇಕಿತ್ತು. ಆಗ ಬಸ್‌ಗಳೂ ಇಲ್ಲದ ಕಾರಣ ಪಾದಯಾತ್ರೆಯೇ ಮಾಡಬೇಕಿತ್ತು.
ಇಲ್ಲೊಂದು ಪ್ರಾಥಮಿಕ ಶಾಲೆ ಬೇಕೆಂಬ ಸ್ಥಳೀಯರ ಬೇಡಿಕೆಯ ಫಲವಾಗಿ ಸರ್ಕಾರದಿಂದ 1994ರಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೆ ಅನುಮತಿ ದೊರಕಿತು. ಆದರೆ ಕಟ್ಟಡದ ಕೊರತೆ ಆದಾಗ ಸರ್ಕಾರಿ ನಾಗರಿಕ ಸಮಿತಿ ಮುಂದೆ ನಿಂತು ಸಂಘದ ಕಟ್ಟಡ ಬಿಟ್ಟುಕೊಟ್ಟಿತು. ಕೆಲವು ವರ್ಷಗಳ ಬಳಿಕ ಸ್ಥಳೀಯ ಪ್ರದೇಶದಲ್ಲೇ ಶಾಲೆಗೆ ಒಂದು ಎಕರೆ ಜಮೀನು ಮಂಜೂರುಗೊಂಡು ಕಟ್ಟಡವೂ ಎದ್ದುನಿಂತಿತು. ಆಗ ಪ್ರಾಥಮಿಕ ಶಿಕ್ಷಣ ನೂತನ ಕಟ್ಟಡಕ್ಕೆ ಶಿಫ್ಟ್ೃ ಆದರೂ ಅಂಗನವಾಡಿ ಕೇಂದ್ರ ನಾಗರಿಕ ಸಮಿತಿ ಕಟ್ಟಡದಲ್ಲೇ ಬಾಕಿಯಾಯಿತು.
ಬಳಿಕ ಅಂಗನವಾಡಿಗೆ ಸ್ವಂತ ಜಮೀನು ಸಿಗಬೇಕು, ಕಟ್ಟಡವೂ ಆಗಬೇಕು ಎಂದು ನಾಗರಿಕ ಸಮಿತಿಯೊಂದಿಗೆ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಬಿ.ಪುಷ್ಪಕುಮಾರಿ ಅವರೂ ಹೋರಾಡಿದ್ದರು. ಆದರೂ ಸರ್ಕಾರದ ಮಟ್ಟದಿಂದ ಪೂರಕ ಸ್ಪಂದನೆ ಸಿಗಲೇ ಇಲ್ಲ. ಕಾರ್ಯಕರ್ತೆಯ ವೇತನ ಇಲಾಖೆಯಿಂದ ಬರುತ್ತಿದ್ದರೂ, ನಾಗರಿಕ ಸಮಿತಿ ಕಟ್ಟಡವನ್ನು ಸಂಪೂರ್ಣ ಉಚಿತವಾಗಿ ನೀಡಿತ್ತು.
ಇನ್ಫೋಸಿಸ್ ನೀಡಿದ ಕೊಡುಗೆ
ಕಳೆದ ವರ್ಷ ಅಂಗನವಾಡಿಗೆ ನಾಗರಿಕ ಸಮಿತಿ ಎರಡೂವರೆ ಸೆಂಟ್ಸ್ ಜಾಗ ನೀಡಿತು. ಆದರೂ ಸರ್ಕಾರದ ಅನುದಾನ ಬರಲಿಲ್ಲ. ಈ ಸಂದರ್ಭ ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಇನ್ಫೋಸಿಸ್ ಅಧಿಕಾರಿಗಳ ಮೊರೆ ಹೋದರು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಆರಂಭದಲ್ಲಿ ಮಾದರಿ ಕಟ್ಟಡ ನಿರ್ಮಾಣದ ಯೋಜನೆ ರೂಪಿಸಿದರೂ, ಬಳಿಕ ಆವರಣ ಗೋಡೆಯನ್ನೂ ನಿರ್ಮಿಸಿ, ಕೇಂದ್ರಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದಾರೆ. 26 ವರ್ಷಗಳಿಂದ ನಾಗರಿಕ ಸಮಿತಿಯಲ್ಲಿದ್ದ ಮಕ್ಕಳು, ನೂತನ ಕಟ್ಟಡಕ್ಕೆ ಶಿಫ್ಟ್ ಆಗಲಿದ್ದಾರೆ. ಆದರೆ ಈ ಕಟ್ಟಡ ನಿರ್ಮಾಣವಾಗಿದ್ದು 25 ವರ್ಷ ಸುದೀರ್ಘ ಸೇವೆ ಸಲ್ಲಿಸಿ, ಕಟ್ಟಡಕ್ಕಾಗಿ ಹೋರಾಡಿದ್ದ ಪುಷ್ಪಕುಮಾರಿ ನಿವೃತ್ತಿಯ ಬಳಿಕ ಎನ್ನುವ ಕೊರಗೂ ಸ್ಥಳೀಯರಲ್ಲಿದೆ.
ಸರ್ಕಾರ ಮಾಡಬೇಕಾಗಿದ್ದ ಕೆಲಸ ಇನ್ಫೋಸಿಸ್ ಸಂಸ್ಥೆಯೊಂದು ಮಾಡಿದೆ. ಜಿಪಂ ಉಪಾಧ್ಯಕ್ಷರಾಗಿದ್ದ ಸಂದರ್ಭ ಅನುದಾನ ತಂದರೂ ಸರ್ಕಾರಿ ನಿಯಮದಿಂದ ಕಟ್ಟಡ ನಿರ್ಮಾಣ ಸಾಧ್ಯವಾಗಿರಲಿಲ್ಲ. ಪ್ರಸಕ್ತ ತಿಂಗಳ ಅಂತರದಲ್ಲೇ ಇನ್ಫೋಸಿಸ್ ಕಟ್ಟಡ ನಿರ್ಮಿಸಿ ಕೊಟ್ಟಿದೆ.
ಸತೀಶ್ ಕುಂಪಲ, ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ
26 ವರ್ಷಗಳಿಂದ ನಾಗರಿಕ ಸಮಿತಿಯ ಕಟ್ಟಡದಲ್ಲೇ ಅಂಗನವಾಡಿ ನಡೆಯುತ್ತಿದ್ದು, ಸರ್ಕಾರದಿಂದ ಶಿಕ್ಷಕಿ ವೇತನ ಮಾತ್ರವೇ ನೀಡಲಾಗುತ್ತಿತ್ತು. ಇದೀಗ ಸತೀಶ ಕುಂಪಲರ ಪ್ರಯತ್ನದಿಂದಾಗಿ ಇನ್ಫೋಸಿಸ್ ಸಂಸ್ಥೆ ನಿರೀಕ್ಷೆಗೂ ಮೀರಿದ ಕಟ್ಟಡ ನಿರ್ಮಿಸಿ ಕೊಟ್ಟಿದೆ.
ಅನಿಲ್ ಬಗಂಬಿಲ, ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ