

ಪಾವಗಡ : ಎಚ್.ಡಿ.ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಗ್ರಾಮ ವಾಸ್ತವ್ಯ ಮಾಡಿದ್ದ ಚಿಕ್ಕನಾಯನಹಳ್ಳಿ ಸರ್ಕಾರಿ ಶಾಲೆ ಕಟ್ಟಡ ಶಿಥಿಲಗೊಂಡಿದೆ. ರಾಜವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ 1ರಿಂದ 7ರವರೆಗೂ 70 ವಿದ್ಯಾರ್ಥಿಗಳಿದ್ದು, 3 ಕೊಠಡಿಗಳಲ್ಲಿ ಒಂದು ಶಿಥಿಲವಾಗಿದ್ದು, 2 ಕೊಠಡಿಗಳಲ್ಲಿ 70 ವಿದ್ಯಾರ್ಥಿಗಳ ಪಾಠ ಪ್ರವಚನ ನಡೆಯುತ್ತಿದೆ.
2007ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಾಗ ಪಾವಗಡ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಇದೇ ಶಾಲೆ ಆಯ್ಕೆ ಮಾಡಿಕೊಂಡು ವಾಸ್ತವ್ಯವಿದ್ದರು. ಅಂದು ಮುಖ್ಯಮಂತ್ರಿ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯವಿದ್ದು ರಾಜ್ಯದಲ್ಲೇ ಸದ್ದು ಮಾಡಿತ್ತು, ಇದೇ ಶಾಲೆಯಲ್ಲಿ ಕೂತು ಕುಮಾರಸ್ವಾಮಿ ನೀಡಿದ್ದ ಭರವಸೆ ಈಡೇರದೆ ಶಾಲೆ ಸೊರಗಿ ಶಿಥಿಲವಾಗಿ ಇಂದೋ, ನಾಳೆಯೋ ಬೀಳುವಂತಿದೆ.
ಇನ್ನು ಎರಡು ಬಾರಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕಣ್ಣಿಗೆ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯವಿದ್ದ ಶಾಲೆಯ ಸಮಸ್ಯೆ ಕಾಣದಿರುವುದು ದುರಂತ.
ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ ಶಾಲೆ ಶಿಥಿಲವಾಗಿದೆ. ಯಾವ ಕ್ಷಣದಲ್ಲಾದರೂ ಕಟ್ಟಡ ಬೀಳುವ ಹಂತದಲ್ಲಿದ್ದು, ಶಾಲೆಯಲ್ಲಿ ಶಿಕ್ಷಕರು ಜೀವ ಭಯದಲ್ಲೇ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರ ಸಹಕಾರದಿಂದ ಹೋರಾಟ ನಡೆಸಲಾಗುವುದು. ಮಾನಂ ಶಶಿಕಿರಣ್ ಹೆಲ್ಪ್ ಸೊಸೈಟಿ ಅಧ್ಯಕ್ಷ ಚಿಕ್ಕನಾಯನಹಳ್ಳಿ ಸರ್ಕಾರಿ ಶಾಲೆಯ ದುರಸ್ತಿ ಬಗ್ಗೆ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಪಂಚಾಯಿತಿ ಗಮನಕ್ಕೆ ತರಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಶಾಲೆಯನ್ನು ದುರಸ್ತಿಗೊಳಿಸಲಾಗುವುದು. ಅಶ್ವತ್ಥನಾರಾಯಣ ಬಿಇಒ