

ಶ್ರೀನಿವಾಸಪುರ: ಶ್ರೀನಿವಾಸಪುರ ಎಂದರೆ ಮಾವಿನ ಮಡಿಲು ಎಂದೇ ಖ್ಯಾತಿ. ಇಲ್ಲಿ ಬೆಳೆಯುವ ಮಾವು ದೇಶ, ವಿದೇಶಗಳಲ್ಲಿ ರ್ತಾಗುವ ಮೂಲಕ ತನ್ನ ಪ್ರಸಿದ್ಧಿ ಹೆಚ್ಚಿಸಿಕೊಂಡಿದೆ. ಇಲ್ಲಿ ಬೆಳೆಯುವಂತ ಬಾದಮಿ, ರಾಜಗೀರಾ, ಬೇನಿಷಾ, ನೀಲಂ, ತೋತಾಪುರಿ, ಸೇಂದೂರಾ, ರಸಪೂರಿ ಇನ್ನು ಹಲವು ತಳಿಯ ಹಣ್ಣಗಳು ದೇಶದಾಚೆಗೂ ರುಚಿ ನೀಡಿ, ಈ ಭಾಗದ ಜನರ ಜೀವನಾಡಿಯಾಗಿ ಅದೆಷ್ಟೋ ರೈತರ ಬದುಕು ಹಸನಾಗಿಸುತ್ತಿವೆ.
ಇತ್ತೀಚಿಗೆ ಅಮೆರಿಕ ಭಾರತದ ಮಾವು ಖರೀದಿಸಲು ಹಿಂದೇಟು ಹಾಕಿದ್ದು, ಇದರಿಂದಾಗಿ ದೇಶದ ಮಾವು ಬೆಳಗಾರರಿಗೆ ಒಂದಿಷ್ಟು ನಷ್ಟವುಂಟಾಗಿದೆ. ಅಲ್ಲದೆ ಮಾವಿನ ದರ ಕುಸಿತದಿಂದ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ತೋತಾಪುರಿ, ಸೇಂದೂರಾ, ರಾಜಗಿರಾ, ರಸಪುರಿ ದರ ತೀವ್ರ ಕುಸಿದಿದೆ. ಮಾವು ಸಗಟು ವ್ಯಾಪಾರಸ್ಥರು ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ. ಜತೆಗೆ ಆಂಧ್ರಪ್ರದೇಶ, ತಮಿಳುನಾಡು, ರಾಮನಗರ ಭಾಗಗಳಲ್ಲೂ ಏಕಕಾಲಕ್ಕೆ ಎಲ್ಲ ಕಡೆ ಮಾವು ಮಾರುಕಟ್ಟೆಗೆ ಬಂದಿರುವುದರಿಂದ ಮಾವಿನ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಹವಾಮಾನ ಏರುಪೇರಾಗಿ ಫೆಬ್ರವರಿಯಲ್ಲಿ ಬಿಸಿಲಿನ ತೀವ್ರತೆ ಇದ್ದ ಪರಿಣಾಮ ಶೇ.70 ಬೆಳೆ ಬಿಸಿಲಿನ ಆಘಾತಕ್ಕೆ ಹಾನಿಯಾಗಿ ಶೇ.30ರಿಂದ 40 ಫಸಲು ಕೈಗೆ ಸಿಕ್ಕಿದೆ. ಶ್ರೀನಿವಾಸಪುರ ಕೇಂದ್ರಿಕೃತವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ತೋತಾಪುರಿ ಮಾವಿನಕಾಯಿ ಈ ಬಾರಿ ಬೆಳೆಗಾರರಿಗೆ ಕಹಿ ನೀಡಿದ್ದು, ಕಾಯಿ ಬೆಲೆ ಕೆಜಿಗೆ 7-8 ರೂ. ಗಡಿ ದಾಟಿಲ್ಲ.
ಚಿಲ್ಲರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ಚಿಲ್ಲರೆ ಧಾರಣಿ ಉತ್ತಮವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ದುಬಾರಿಯಾಗಿದೆ. ಅಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಆದರೆ ಸಗಟು ಧಾರಣೆ ಇಲ್ಲದ ಕಾರಣ ಮಾವು ಬೆಳೆಗಾರನಿಗೆ ಹಣ ದಕ್ಕುತ್ತಿಲ್ಲ.
ಖರೀದಿ ಮಾಡದ ಸಂಸ್ಕರಣ ಘಟಕಗಳು
ಮಾವು ಸಂಸ್ಕರಣ ಘಟಕಗಳವರು ಮಾವು ಖರೀದಿಗೆ ಮುಂದಾಗಿಲ್ಲ, ಕಳೆದ ವರ್ಷದ ಮಾವು ರ್ಖಚಾಗದೆ ಸಂಸರಣಾ ಘಟಕಗಳ ಗೋದಾಮುಗಳಲ್ಲಿಯೇ ಉಳಿದಿದ್ದ ಕಾರಣ ಈ ವರ್ಷ ಖರಿದಿ ಮಾಡಬೇಕಾ?, ಬೇಡ್ವಾ ಎಂದು ಮೀನಮೇಷ ಎಣಿಸುತ್ತಿರುವುದು ದರ ಕುಸಿತಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ.
ಬೆಂಬಲ ಬೆಲೆ ಘೋಷಣೆಗೆ ಆಗ್ರಹ
ಶ್ರೀನಿವಾಸಪುರ ಕೇಂದ್ರಿಕೃತವಾಗಿ ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿ, ನಾಲೆಗಳು ಇಲ್ಲ. ಇಲ್ಲಿ ಮಳೆ ನಂಬಿ ಜೀವನ ಕಟ್ಟಿಕೊಂಡಿರುವ ಸಾಮಾನ್ಯ ಮಾವು ಬೆಳೆಗಾರರು ವರ್ಷಕ್ಕೊಮ್ಮೆ ಬರುವ ಬೆಳೆ ನಂಬಿ ಮನೆ ಕಟ್ಟಿಕೊಳ್ಳಲೊ ಅಥವಾ ಮನೆಯಲ್ಲಿ ಮದುವೆ ಕಾರ್ಯಕ್ಕೆ ಉಪಯೋಗಕ್ಕೆ ಆಸರೆಯಾಗುತ್ತದೆ ಎಂದು ಅದೇಷ್ಟೂ ಕುಟುಂಬಗಳು ಕಾಯುತ್ತಿದ್ದರು. ಪ್ರತ್ಯಕ್ಷ&ಪರೋಕ್ಷವಾಗಿ ಜನರ ಬದುಕಿಗೆ ಮಾವು ಆಸರೆಯಾಗಿತ್ತು. ಈ ವರ್ಷ ಬೆಳೆ ಇದ್ದೂ ಇಲ್ಲದಂತಾಗಿದೆ ಎನ್ನುತ್ತಾರೆ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರು.
ನಾವು ಎಷ್ಟು ಹೋರಾಟ ಮಾಡಿದರೂ ಸಹ ಸರ್ಕಾರ ಮತ್ತು ತೋಟಗಾರಿಕಾ ಸಚಿವರು ಹಾಗೂ ನಮ್ಮ ಭಾಗದ ಎಲ್ಲ ಜನಪ್ರತಿನಿಧಿಗಳು ಮಾವು ಮಂಡಲಿಗೆ ಹೆಚ್ಚಿನ ಅನುದಾನ ಕೊಡಿಸುವಲ್ಲಿ ವಿಫಲವಾಗಿದ್ದಾರೆ. ಬೆಳೆಗಾರರಿಗೆ ಅನಕೂಲವಾಗಲು ಮಾವು ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕೃಷಿ ಆಧಾರಿತ ಕೈಗಾರಿಕೆಗಳನ್ನು ಶ್ರೀನಿವಾಸಪುರ ತಾಲೂಕಿಗೆ ತರಬೇಕಿದೆ.
- ನೀಲಟೂರು ಚಿನ್ನಪ್ಪರೆಡ್ಡಿ
ಅಧ್ಯಕ್ಷ, ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘ