ಗಾಳಿಮಳೆ ಹೊಡೆತಕ್ಕೆ ಹೆಸ್ಕಾಂನ 36.89 ಲಕ್ಷ ರೂ. ಹಾನಿ

hescom-logo
Published on

ಕುಮಟಾ: ಮೇ 20ರಿಂದ ಈವರೆಗೆ ಹೆಸ್ಕಾಂನ ಕುಮಟಾ ಉಪವಿಭಾಗ ವ್ಯಾಪ್ತಿಯಲ್ಲಿ ಗಾಳಿಮಳೆ ಹೊಡೆತಕ್ಕೆ ಬಹಳಷ್ಟು ವಿದ್ಯುತ್ ಕಂಬ ಹಾಗೂ ಟ್ರಾನ್ಸಫಾರ್ಮರ್​ಗಳು ಹಾಳಾಗಿದ್ದು 36.89 ಲಕ್ಷ ರೂ.ಗಳಷ್ಟು ಹಾನಿಯಾಗಿದೆ ಎಂದು ಹೆಸ್ಕಾಂ ಎಇಇ ರಾಜೇಶ ಮಡಿವಾಳ ತಿಳಿಸಿದ್ದಾರೆ.

ಗೋಕರ್ಣ ವಿಭಾಗದಲ್ಲಿ ವಿದ್ಯುತ್ ಕಂಬಗಳು 14, ಪಟ್ಟಣ ಭಾಗದಲ್ಲಿ 16, ಗ್ರಾಮೀಣ ಭಾಗದಲ್ಲಿ 45 ಹಾಗೂ ಮರಾಕಲ್ ವಿಭಾಗದಲ್ಲಿ 21 ಕಂಬಗಳು ಒಟ್ಟೂ 96 ಕಂಬಗಳು ಮುರಿದು 14.44 ಲಕ್ಷ ರೂ. ಹಾನಿಯಾಗಿದೆ.

ಇದೇ ರೀತಿಯಾಗಿ ಟ್ರಾನ್ಸಫಾರ್ಮರ್​ಗಳು(ಡಿಟಿಸಿ) ಗೋಕರ್ಣ ವಿಭಾಗದಲ್ಲಿ 9, ಪಟ್ಟಣ ಭಾಗದಲ್ಲಿ 3, ಗ್ರಾಮೀಣ ಭಾಗದಲ್ಲಿ 7 ಹಾಗೂ ಮರಾಕಲ್ ವಿಭಾಗದಲ್ಲಿ 6, ಒಟ್ಟು 25 ಟ್ರಾನ್ಸಫಾರ್ಮರ್​ಗಳು ಹಾಳಾಗಿ 22.45 ಲಕ್ಷ ರೂ. ಹಾನಿಯಾಗಿದೆ.

ಈಗಾಗಲೇ ಹಾನಿಗೊಳಗಾದ ಬಹುತೇಕ ಎಲ್ಲೆಡೆ ವಿದ್ಯುತ್ ಕಂಬಗಳನ್ನು ಹಾಗೂ ಟ್ರಾನ್ಸಫಾರ್ಮರ್​ಗಳನ್ನು ಅಳವಡಿಸಲಾಗಿದ್ದು, ಶೇ. 99ರಷ್ಟು ವಿದ್ಯುತ್ ಸಂಪರ್ಕ ಮರುಸ್ಥಾಪಿಸಲಾಗಿದೆ ಎಂದು ಎಇಇ ರಾಜೇಶ ಮಡಿವಾಳ ವಿಜಯವಾಣಿಗೆ ತಿಳಿಸಿದ್ದಾರೆ.

ರಸ್ತೆ ಮೇಲಿನ ಮಣ್ಣಿನ ರಾಶಿ ಜೆಸಿಬಿಯಿಂದ ತೆರವು

ತಾಲೂಕಿನ ಹರಕಡೆ ಮೂಲಕ ಮುಸಸಗುಪ್ಪೆ, ಮೂರೂರು ಸಂರ್ಪಸುವ ಪಿಡಬ್ಲು್ಯಡಿ ರಸ್ತೆಯಲ್ಲಿ ಭಾನುವಾರ ರಾತ್ರಿ ಬಿದ್ದಿದ್ದ ಕಲ್ಲು ಮಣ್ಣಿನ ರಾಶಿಯನ್ನು ಸೋಮವಾರ ಜೆಸಿಬಿಯಿಂದ ತೆರವುಗೊಳಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಗುಡ್ಡದ ದೊಡ್ಡ ಕಲ್ಲುಬಂಡೆಗಳು ಬಿದ್ದಿದ್ದರಿಂದ ರಸ್ತೆಯಲ್ಲಿ ಸಂಚಾರ ಬಂದ್ ಆಗಿತ್ತು. ಆಸುಪಾಸಿನಲ್ಲಿ ಜನವಾಸ್ತವ್ಯ ಇಲ್ಲದ್ದರಿಂದ ಯಾವುದೇ ಜೀವಾಪಾಯದ ಘಟನೆ ನಡೆದಿಲ್ಲ. ಕಲ್ಲುಬಂಡೆ ಮಣ್ಣಿನ ರಾಶಿ ಹಾಗೂ ಇನ್ನಷ್ಟು ಸಂಭವನೀಯ ಗುಡ್ಡ ಕುಸಿತದ ಭಾಗವನ್ನೂ ತೆರವುಗೊಳಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net