ಹೆಸ್ಕಾಂ ಅಧ್ಯಕ್ಷರಾಗಿ ಖಾದ್ರಿ ಅಧಿಕಾರ ಸ್ವೀಕಾರ,  ಶಾಸಕರು, ಸಚಿವರಿಂದ ಅಭಿನಂದನೆ

IMG-20241129-WA0014.jpg
Published on

ಹುಬ್ಬಳ್ಳಿ: ರೈತರ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಪೂರೈಕೆ, ಉಚಿತ ವಿದ್ಯುತ್ ಯೋಜನೆಯನ್ನು ಸಮರ್ಪಕ ಜಾರಿ ಮಾಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜೀಂಪೀರ್ ಖಾದ್ರಿ ಹೇಳಿದರು.

ಇಲ್ಲಿಯ ನವನಗರದಲ್ಲಿರುವ ಹೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಕಾಂಗ್ರೆಸ್ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ. ರೈತರು ಬೆಳೆ ಬೆಳೆದಾಗಲೇ ಎಲ್ಲರೂ ಸುಖವಾಗಿರಲು ಸಾಧ್ಯ. ಹಾಗಾಗಿ ಅವರಿಗೆ ಯಾವುದೇ ಅಡೆತಡೆ ಇಲ್ಲದೇ ವಿದ್ಯುತ್ ಪೂರೈಕೆ ಮಾಡಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಉಚಿತ ವಿದ್ಯುತ್ ಪೂರೈಕೆ ಮಾಡುವ ಮೂಲಕ ಕಾಂಗ್ರೆಸ್ ಬಡವರ ಪಾಲಿನ ಆಶಾಕಿರಣವಾಗಿದೆ. ಸರ್ಕಾರ ಘೋಷಿಸಿದ ಗ್ಯಾರಂಟಿಗಳಲ್ಲಿ ಉಚಿತ ವಿದ್ಯುತ್ ಮಹತ್ವದ ಯೋಜನೆಯಾಗಿದೆ. ಇದಕ್ಕೆ ಯಾವುದೇ ತೊಂದರೆಯಾಗದಂತೆ ಗಮನ ಹರಿಸಲಾಗುವುದು ಎಂದರು.

ಹೆಸ್ಕಾಂನಲ್ಲಿ ವಿದ್ಯುತ್ ಸೋರಿಕೆಯನ್ನು ತಡೆಗಟ್ಟುವುದು ಸಹ ಮಹತ್ವದ್ದಾಗಿದೆ. ಅಕ್ರಮ, ಅವ್ಯವಹಾರ ಎಸಗುವ ಅಧಿಕಾರಿಗಳ ವಿರುದ್ಧ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುವುದು ಎಂದೂ ಖಾದ್ರಿ ಅವರು ಎಚ್ಚರಿಸಿದರು.

ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಸಂಚರಿಸಿ ಕುಂದು ಕೊರತೆಗಳನ್ನು ಆಲಿಸಲಾಗುವುದು. ಒಟ್ಟಾರೆ, ಜನಸ್ನೇಹಿ, ರೈತ ಸ್ನೇಹಿ ಕಾಂಗ್ರೆಸ್ ಸರ್ಕಾರಕ್ಕೆ ಇನ್ನಷ್ಟು ಪೂರಕವಾಗಿ ಕೆಲಸ ಮಾಡಿ ಆಡಳಿತದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

ದೊಡ್ಡ ಹುಣಸೆ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಅಜೀಂಪೀರ ಖಾದ್ರಿ ಅವರು ಯಾವುದೇ ಜಾತಿ, ಧರ್ಮಕ್ಕೆ ಅಂಟಿಕೊಂಡವರಲ್ಲ. ಜಾತ್ಯತಿತವಾಗಿ ಎಲ್ಲ ಜನ ವರ್ಗದವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪಕ್ಷದಲ್ಲಿ ಅವರ ಪ್ರಾಮಾಣಿಕ ಸೇವೆ, ತ್ಯಾಗಕ್ಕೆ ದೊಡ್ಡ ಹುದ್ದೆ ಒಲಿದು ಬಂದಿದೆ ಎಂದರು.

ಶಿಗ್ಗಾಂವಿ ವಿರಕ್ತಮಠದ ಸ್ವಾಮೀಜಿ, ಶಿಗ್ಗಾಂವಿ ಶಾಸಕ ಯಾಸೀರ್ಖಾನ್ ಪಠಾಣ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net