

ಕಾರವಾರ:ವಿದ್ಯುತ್ ಗ್ರಿಡ್‌ನಲ್ಲಿ ಕಾರ್ಯನಿರ್ವಹಿಸುವಾಗ ಶಾಕ್ ತಗುಲಿ ಮಾರಣಾಂತಿಕವಾಗಿ ಗಾಯಗೊಂಡ ಯುವಕ ಹೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಅವಜ್ಞೆಗೆ ಒಳಗಾದ ಘಟನೆ ನಡೆದಿದೆ.
ಹಣಕೋಣ ವಿದ್ಯುತ್ ಉಪ ಕೇಂದ್ರದಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೊರ ಗುತ್ತಿಗೆ ನೌಕರ ಸುನೀಲ ನಾಯ್ಕ ಎಂಬುವವರಿಗೆ ಕೆಲ ದಿನಗಳ ಹಿಂದೆ ರಿಪೇರಿ ಕಾರ್ಯ ಮಾಡುವ ವೇಳೆ ಶಾಕ್ ತಗುಲಿತ್ತು. ಸಂಪೂರ್ಣ ದೇಹ ಸುಟ್ಟು ಹೋಗಿದೆ. ಹಲವು ದಿನಗಳ ಆಸ್ಪತ್ರೆ ವಾಸದ ಬಳಿಕ ಅವರು ಈಗ ಮನೆಗೆ ತೆರಳಿದ್ದಾರೆ.
ಆದರೆ, ಅವರ ಗುತ್ತಿಗೆದಾರರಾಗಲೀ ಹೆಸ್ಕಾಂ ಅಧಿಕಾರಿಗಳಾಗಲಿ ಅವರಿಗೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಿಲ್ಲ. ಇದರಿಂದ ಕೆಲಸವನ್ನೂ ಮಾಡಲಾಗದ ಸುನೀಲ್ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಸೋಮವಾರ ಕಾರವಾರ ಬಾಂಡಿಶಿಟ್ಟಾ ಹೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಶಾಸಕ ಸತೀಶ ಸೈಲ್ ಸುನೀಲ ನಾಯ್ಕ ಅವರ ಪರಿಸ್ಥಿತಿ ನೋಡಿ ಮರುಗಿದರು. ಅವರಿಗೆ ಸೂಕ್ತ ಪರಿಹಾರ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಆದೇಶ ಮಾಡಿದರು.
ತಕ್ಷಣ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿ, ಇಎಸ್‌ಐ ಅಥವಾ ಬೇರ್ಯಾವುದಾದರೂ ವಿಮಾ ಸೌಲಭ್ಯ ಕೊಡಿಸಲು ಕ್ರಮ ವಹಿಸಬೇಕು ಎಂದು ಆದೇಶಿಸಿದರು.
ನುಣುಚಿಕೊಂಡರು:
ಸುಟ್ಟ ಗಾಯಗಳೊಂದಿಗೆ ಸುನೀಲ ನಾಯ್ಕ ಸೋಮವಾರ ಶಾಸಕರ ಎದುರು ಆಗಮಿಸಿದರು. "ಈ ಹಿಂದೆಯೂ ನಾನು ಗ್ರಿಡ್ ಹತ್ತಿ ಕೆಲಸ ಮಾಡಿದ್ದೆ. ಈಗ ರಸ್ತೆಯಲ್ಲಿ ವಿದ್ಯುತ್ ಕಿಡಿ ಬೀಳುತ್ತಿತ್ತು. ಯಾರಿಗಾದರೂ ಅಪಾಯ ಸಂಭವಿಸಬಹುದು ಎಂದು ನಾನು ದುರಸ್ತಿ ಮಾಡಲು ಹೋದೆ ಅಪಾಯ ಸಂಭವಿಸಿತು ಎಂದು ತಮಗಾದ ಅಪಘಾತದ ವಿವರ ನೀಡಿದರು. ಆದರೆ, ಗುತ್ತಿಗೆ ಕಂಪನಿ ಹಾಗೂ ಹೆಸ್ಕಾಂ ಇಬ್ಬರೂ ಆತನಿಗಾದ ನೋವು ನಮಗೆ ಸಂಬಂಧವಿಲ್ಲ ಎಂದು ನುಣುಚಿಕೊಂಡರು.
`ಹರ್ಷ ಇಲೆಕ್ಟಿçಕಲ್ಸ್' ಎಂಬ ಗುತ್ತಿಗೆ ಕಂಪನಿಯಡಿ ಅವರು ಹಣಕೋಣ ಗ್ರಿಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಕಂಪನಿ ಮಾಲೀಕರು ಮಾತನಾಡಿ, ನಾವು ಕಾರ್ಮಿಕರನ್ನು ಹೆಸ್ಕಾಂಗೆ ನೀಡುತ್ತೇವೆ. ಅವರ ಕೆಲಸದ ಮೇಲ್ವಿಚಾರಣೆ ಹೆಸ್ಕಾಂ ಅಧಿಕಾರಿಗಳಿಗೆ ಬಿಟ್ಟಿದೆ.
ಇನ್ನು ಸುನೀಲ್ ಟೆಕ್ನೀಶಿಯನ್ ಅಲ್ಲ. ಆತ ಸಹಾಯಕ. ಆತ ಗ್ರಿಡ್ ಹತ್ತುವ ಅಥವಾ ರಿಪೇರಿ ಮಾಡುವ ಮಾಹಿತಿ ಇಲ್ಲ. ಅಧಿಕಾರವೂ ಇಲ್ಲ. ಆತನಿಗೆ ರಿಪೇರಿಗೆ ಇಳಿಯಲು ನಾವ್ಯಾರೂ ಹೇಳಿಲ್ಲ. ನಾವು ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಿದ್ದೇವೆ. ಪರಿಹಾರ ನಾವು ಕೊಡಲು ಸಾಧ್ಯವಿಲ್ಲ ಎಂದರು.
ಹೆಸ್ಕಾಂ ಅಧಿಕಾರಿಗಳು, ಗುತ್ತಿಗೆ ಕಂಪನಿ ಒದಗಿಸುವ ಕಾರ್ಮಿಕರ ಜವಾಬ್ದಾರಿ ಆ ಕಂಪನಿಗೆ ಬಿಟ್ಟಿದೆ. ನಮಗೆ ಸಂಬಂಧವಿಲ್ಲ ಎಂದರು. ಸಮಸ್ಯೆ ಅರಿತ ಸೈಲ್ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದರು.