ಗ್ರಾಹಕರ ಜೇಬಿಗೆ ಹೆಸ್ಕಾಂ ಕತ್ತರಿ..!

Hescom cuts into customers' pockets..!
Published on

ಶಂಕರ ಈ. ಹೆಬ್ಬಾಳ
ಮುದ್ದೇಬಿಹಾಳ: ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವ ಮತದಾರರಿಗೆ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ ಲಾಭ ಪಡೆದುಕೊಳ್ಳಲು ಹತ್ತಾರು ನಿಯಮಗಳನ್ನು ಜಾರಿಗೊಳಿಸಿರುವ ಸರ್ಕಾರದ ವಿರುದ್ಧ ಸಾರ್ವಜನಿಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ.

ಚುನಾವಣೆ ಸಮಯದಲ್ಲಿ ಯಾವುದೇ ನಿಯಮಗಳನ್ನು ಹೇಳದೆ ಈಗ ಅನುಷ್ಠಾನ ಸಮಯದಲ್ಲಿ ವಿವಿಧ ನಿಯಮಗಳನ್ನು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಇಟ್ಟ ನಂಬಿಕೆ ಹುಸಿಯಾಗುವಂತೆ ಮಾಡಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಈ ಗೊಂದಲದ ತಲೆಬಿಸಿಯ ಮಧ್ಯೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಹೆಸ್ಕಾಂ ಸೇರಿದಂತೆ ಎಲ್ಲ ವಿದ್ಯುತ್ ನಿಗಮಗಳಿಗೆ ವಿದ್ಯುತ್ ಬೆಲೆ ಹೆಚ್ಚಳದ ಆದೇಶ ಕಳುಹಿಸಿದ್ದು, ಇದ್ದಕ್ಕಿದ್ದಂತೆ ವಿದ್ಯುತ್ ಬಿಲ್‌ನಲ್ಲಿ ಆದ ಹೆಚ್ಚಳಕ್ಕೆ ಕಂಗಾಲಾದ ಗ್ರಾಹಕರು ಹೆಸ್ಕಾಂ ಕಚೇರಿಗೆ ಅಲೆದಾಡುತ್ತಿದ್ದಾರೆ.

ಏಪ್ರಿಲ್ 1 ರಿಂದ ಹೊಸ ದರ ಪೂರ್ವಾನ್ವಯ

2023ರ ವಿಧಾನಸಭಾ ಚುನಾವಣೆ ಲಿತಾಂಶ ಪ್ರಕಟವಾಗುವವರೆಗೂ ಮೌನವಾಗಿದ್ದ ಕೆಇಆರ್‌ಸಿ ರಾಜ್ಯದ ಭವಿಷ್ಯ ನಿರ್ಧರಿಸುವ ಮತ ಎಣಿಕೆಯ ಹಿಂದಿನ ದಿನವೇ ವಿದ್ಯುತ್ ಬಳಕೆಗೆ ವಿಧಿಸುವ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಏ.1ರಿಂದಲೇ ಈ ಹೊಸ ದರ ಪೂರ್ವಾನ್ವಯವಾಗಲಿದೆ ಎಂದು ಆಯೋಗದ ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರದ ಅವಧಿ ಮುಗಿದು, ಹೊಸ ಸರ್ಕಾರ ರಚನೆಯಾಗುವ ಸಂಕ್ರಮಣ ಕಾಲದಲ್ಲಿ ದರ ಏರಿಕೆ ಬಿಸಿ ವಿದ್ಯುತ್ ಬಳಕೆದಾರರಿಗೆ ತುಸು ಜೋರಾಗಿಯೇ ತಟ್ಟಿದೆ. ಹೀಗಾಗಿ ನಿತ್ಯವೂ ಹೆಸ್ಕಾಂ ಕಚೇರಿಗೆ ಬಿಲ್ ಹಿಡಿದುಕೊಂಡು ಬರುತ್ತಿರುವ ಗ್ರಾಹಕರು ‘ನಮ್ಮದು ಇಷ್ಟಾಗುವುದಿಲ್ಲ. ಇಷ್ಟೊಂದು ಬಿಲ್ ಯಾಕೆ ಕೊಟ್ಟಿದ್ದೀರಿ? ಎಂದು ಹೆಸ್ಕಾಂ ನೌಕರರು, ಮೀಟರ್ ರೀಡರ್‌ಗಳೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ.

ಸೋಲಾರ್ ಸಬ್ಸಿಡಿ ರದ್ದು, ವಾಣಿಜ್ಯ ಬಳಕೆಗೂ ಭಾರಿ ಹೆಚ್ಚಳ

ಹೊಸ ಆದೇಶದಲ್ಲಿ ವಾಣಿಜ್ಯ ಬಳಕೆಗೆ 125 ರೂ. ಒಂದು ಕಿಲೋವ್ಯಾಟ್ ಇದ್ದದ್ದನ್ನು 200 ರೂ. ಗೆ ಪರಿಷ್ಕರಿಸಿದ್ದು 75 ರೂ. ಹೆಚ್ಚಿಸಲಾಗಿದೆ. ಅಲ್ಲದೇ 10 ಪೈಸೆ ಟ್ಯಾರ್ಿ ದರ ಹೆಚ್ಚಿಸಲಾಗಿದೆ. ಸೋಲಾರ್ ಮೇಲೆ ಇದ್ದ ಸಬ್ಸಿಡಿ ರದ್ದುಗೊಳಿಸಿ ಆದೇಶಿಸಲಾಗಿದೆ. ಕೈಗಾರಿಕೆ ಬಳಕೆಗೆ ಸಂಬಂಧಿಸಿದಂತೆ 1-100 ಎಚ್.ಪಿ 140 ರೂ. ಗಳಂತೆ ಹೆಚ್ಚಿಸಲಾಗಿದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿಗೂ ಅಲ್ಪದರ ಹೆಚ್ಚಿಸಲಾಗಿದೆ. ಇದು ಸಹಜವಾಗಿ ಸೋಲಾರ ಬಳಕೆದಾರರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ವಾಣಿಜ್ಯ ಬಳಕೆದಾರರಿಗೆ ಬಿಗ್ ಶಾಕ್ ಕೊಟ್ಟಿದೆ.

ನಮಗೆ ವಿದ್ಯುತ್ ಬಿಲ್ ಸಾಮಾನ್ಯವಾಗಿ 350- 400 ರೂ. ಆಸುಪಾಸು ಬರುತ್ತಿತ್ತು. ಈಗ ಬಾಕಿ ಹಿಡಿದು ಒಟ್ಟು ಬಿಲ್ 1084 ಬಂದಿದೆ. ಆದರೆ ಮೊಬೈಲ್‌ಗೆ 1164 ಬಂದಿದೆ. ಇದು ಹೀಗೇಕೆ? ಎಂದು ಕೇಳಿದರೆ ಟಕ್ನಿಕಲ್ ಇಶ್ಯೂ ಎನ್ನುತ್ತಾರೆ. 116 ರೂ. ವ್ಯತ್ಯಾಸ ಬಂದಿದೆ. ಎಂದೂ ಹೀಗೆ ಆಗಿರಲಿಲ್ಲ. ದಿಢೀರ್ ಬಿಲ್ ದರ ಹೆಚ್ಚಳವಾಗಿದ್ದು ಸಮರ್ಪಕ ಉತ್ತರ ಸಿಗುತ್ತಿಲ್ಲ.
ಎಂ.ಎಸ್. ಪಾಟೀಲ್, ಮುದ್ನಾಳ ಗ್ರಾಮದ ನಿವಾಸಿ

ಮೊದಲು ಯೂನಿಟ್‌ಗೆ 3, 4 ರೂ. ಇದ್ದ ವಿದ್ಯುತ್ ದರ ಈಗ 4.25 ರೂ.ಗಳಿಗೆ ಹೆಚ್ಚಿಸಿದ್ದಾರೆ. 50-100 ಯೂನಿಟ್ ಬಳಸಿದರೆ 7 ರೂ. ಗೆ ಹೆಚ್ಚಿಸಿದ್ದಾರೆ. ಟ್ಯಾಕ್ಸ್ ಕೂಡ ಹೆಚ್ಚಿಸಿದ್ದಾರೆ. ಈ ಮುಂಚೆ ನಮ್ಮ ಮನೆಯ ಬಿಲ್ 500 ರೂ. ಬರುತ್ತಿತ್ತು. ಆದರೆ ಈಗ 1000-1500 ರೂ. ಬಂದಿದೆ. ಬೆಲೆ ಹೆಚ್ಚಿಸಿ 200 ಯೂನಿಟ್ ಉಚಿತ ಎಂದು ಹೇಳಿ, ಈಗ ವರ್ಷದ ಆವರೇಜ್ ಎಂದೆಲ್ಲಾ ಹೇಳುವುದು ಸರಿಯಲ್ಲ. ಪ್ರತಿ ಯೂನಿಟ್ ದರ ಹಾಗೂ ಟ್ಯಾಕ್ಸ್‌ನ್ನು ಇಳಿಕೆ ಮಾಡಬೇಕು.ಎಂ.ವಿ. ಬಿಳೇಭಾವಿ, ನಿವೃತ್ತ ಶಿಕ್ಷಕರು

ನನಗೆ ತಿಂಗಳಿಗೆ 670 ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಈಗ 1900 ಕ್ಕೂ ಬಿಲ್ ಬಂದಿದೆ. ಕೇಳಿದರೆ ನಮಗೆ ಆ ಚಾರ್ಜ್, ಈ ಚಾರ್ಜ್ ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ನಮಗೆ ಒಂದು ತಿಳಿಯುತ್ತಿಲ್ಲ.ಮೋತಿಲಾಲ್ ಜಾಧವ, ಕುಂಟೋಜಿ ಗ್ರಾಹಕ

ಈ ವರ್ಷ ಏ.1 ರಂದು ದರಪಟ್ಟಿ ಪರಿಷ್ಕರಣೆ ಆಗಬೇಕಿತ್ತು. ಆದರೆ ಮೇ.12 ರಂದು ಪರಿಷ್ಕರಣೆ ಮಾಡಲಾಗಿದೆ. ಸ್ಲಾೃಬ್ ರೇಟ್ 4.75 ಇದೆ. 100 ಯೂನಿಟ್ ಬಳಕೆ ಮೇಲೆ 7 ರೂ. ಹೆಚ್ಚಿಸಲಾಗಿದೆ. ಫ್ಯೂಯೆಲ್​ ಅಡ್ಜಸ್ಟ್‌ಮೆಂಟ್ ಕಾಸ್ಟ್ ಮೊದಲು 57 ಪೈಸೆ ಇತ್ತು. ಈಗ ಅದನ್ನು 2.55 ರೂ. ಮಾಡಿದ್ದಾರೆ.ಫ್ಯೂಯೆಲ್​ ಅಡ್ಜಸ್ಟ್‌ಮೆಂಟ್ ಕಾಸ್ಟ್ ಏ.1 ರಂದು ಜಾರಿಗೆ ಬರಬೇಕಿತ್ತು. ಆದರೆ ಮೇ, ಜೂನ್ ತಿಂಗಳಲ್ಲಿ ಅದನ್ನು ಹಾಕಿಕೊಳ್ಳಲಾಗಿದೆ. ನಮಗೆ ಆದೇಶವಾಗಿರುವ ಪ್ರಕಾರ ಬಿಲ್ ಕಳಿಸಿಕೊಟ್ಟಿದ್ದೇವೆ. ಮೇ ತಿಂಗಳು ಅನ್ವಯಿಸದೆ ಜೂನ್ ತಿಂಗಳಿನಿಂದ ಬಿಲ್ ಅನ್ವಯಿಸಿರುವುದಕ್ಕೆ ಹಾಗೂ ಮೇ ತಿಂಗಳ ಕೊರತೆಯನ್ನು ಜೂನ್ ಬಿಲ್‌ನಲ್ಲಿ ಸೇರಿಸಿರುವುದು ಗ್ರಾಹಕರಲ್ಲಿ ಗೊಂದಲ ಮೂಡಿದೆ. ಮೇ. 12 ರಂದು ಈ ಆದೇಶ ನಮಗೆ ಬಂದಿದೆ.ಬಿ.ಎ. ಮಡಿವಾಳರ, ಹೆಸ್ಕಾಂ ಲೆಕ್ಕಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net