ದೇಶ ಸುತ್ತಿದ ತಂದೆ-ಮಗನಿಗೆ 'ಹಿರೋ' ಗಿಫ್ಟ್​...!

Bike Gift 1
Published on

25 ವರ್ಷ ಹಳೆಯ ಸ್ಪ್ಲೆಂಡರ್ ಬೈಕ್​ನಲ್ಲಿ ಸಂಚಾರ

ಜಮ್ಮು-ಕಾಶ್ಮೀರದಲ್ಲಿ ಕನ್ನಡ ಬಾವುಟ ಹಾರಾಟ

ವಿಜಯವಾಣಿ ಸುದ್ದಿಜಾಲ ಉಡುಪಿ

ತಮ್ಮ ಬಳಿಯಿದ್ದ 25 ವರ್ಷ ಹಳೆಯದಾದ ಹಿರೋ ಹೋಂಡಾ ಸ್ಪ್ಲೆಂಡರ್​ ಬೈಕ್​ನಲ್ಲಿ ವಿಶ್ವದ 2ನೇ ಅತಿ ಎತ್ತರದ ಪ್ರದೇಶವಾದ ಜಮ್ಮು-ಕಾಶ್ಮೀರದ ಖರ್ದುಂಗ್ಲಾ ಪ್ರದೇಶಕ್ಕೆ ತೆರಳಿ ಕನ್ನಡ ಬಾವುಟ ಹಾರಿಸಿ ಕನ್ನಡಾಭಿಮಾನ ಮೆರೆದಿದ್ದ ತಂದೆ-ಮಗನಿಗೆ ಹೀರೋ ಮೋಟೋ ಕಾರ್ಪ್​ ಸಂಸ್ಥೆಯು ಹೊಸ ಬೈಕ್​ ಗಿಫ್ಟ್ ಘೋಷಿಸಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದ ರಾಜೇಂದ್ರ ಶೆಣೈ ಮತ್ತು ಅವರ ಮಗ ಪ್ರಜ್ವಲ ಶೆಣೈ ಅವರ ಈ ಅಪ್ರತಿಮ ಸಾಹಸ ಗುರುತಿಸಿದ ಸಂಸ್ಥೆಯು, ಹಿರೋ ಸೆಂಟೆನ್ನಿಯಲ್​ ಹೊಸ ಬೈಕ್​ ನೀಡಿ ಗೌರವಿಸಲಿದೆ.

ಏಕಾಂಗಿ ಸಂಚಾರ

Bike Gift 3
ಪ್ರಜ್ವಲ ಶೆಣೈ ಹಳೆಯ ಸ್ಪ್ಲೆಂಡರ್​ ಬೈಕ್​ ಮೂಲಕ ದೇಶದ 17 ರಾಜ್ಯಗಳಲ್ಲಿ ಏಕಾಂಗಿಯಾಗಿ ಸಂಚರಿಸಿದ್ದನು. ತಂದೆ ರಾಜೇಂದ್ರ ಅವರೊಂದಿಗೆ ಪ್ರಯಾಣಿಸಿ 5 ವರ್ಷದಲ್ಲಿ ಸುಮಾರು 50 ಸಾವಿರ ಕಿ.ಮೀ. ಕ್ರಮಿಸಿದ್ದನು. 19ನೇ ವಯಸ್ಸಿನಲ್ಲಿ ಬೈಕ್​ ಮೂಲಕ ಬೆಂಗಳೂರಿಗೆ ಪ್ರಥಮ ಬಾರಿಗೆ ಪ್ರಯಾಣ ಮಾಡಿದ್ದನು. ಬಳಿಕ ತಿರುಪತಿ, ಮಧುರೈ, ಕನ್ಯಾಕುಮಾರಿ, ಗೋವಾದ ಮಾದೋರ್ಳ ದೇಗುಲ, ಪುರಿಯ ಜಗನ್ನಾಥ ದೇವಾಲಯ, ಶಿರಡಿ, ನಾಸಿಕ್​, ಪಂಢರಾಪುರ, ಅಯೋಧ್ಯಾ ರಾಮ ಮಂದಿರ ಮೊದಲಾದ ದೇಗುಲಗಳಿಗೆ ಭೇಟಿ ನೀಡಿದ್ದರು.

ಮಹಾಕುಂಭ ಮೇಳಕ್ಕೆ ಭೇಟಿ

2024ರ ಜೂನ್​ನಲ್ಲಿ ಬೈಕ್​ ಮೂಲಕ 10 ದಿನದಲ್ಲಿ ಸುಮಾರು 2,100 ಕಿ.ಮೀ. ಪ್ರಯಾಣ ಬೆಳೆಸಿ, ಖರ್ದುಂಗ್ಲಾ ತಲುಪಿ ಕನ್ನಡ ಬಾವುಟ ಹಾರಿಸಿದ್ದರು. 2025ರ ಫೆಬ್ರವರಿಯಲ್ಲಿ 9 ದಿನದಲ್ಲಿ ಸುಮಾರು 4 ಸಾವಿರ ಕಿ.ಮೀ. ಕ್ರಮಿಸಿ ಪ್ರಯಾಗರಾಜ್​ ತಲುಪಿ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿ ಹಿಂತಿರುಗಿದ್ದರು.

ವಾಹನ ಹಸ್ತಾಂತರ ಕಾರ್ಯಕ್ರಮ ಜೂ.28ಕ್ಕೆ

Bike Gift 4
ಹಿರೋ ಸಂಸ್ಥೆಯು 25 ವರ್ಷ ಹಳೆಯದಾದ ಸ್ಪ್ಲೆಂಡರ್​ ಬೈಕ್​ನಲ್ಲಿ ದೇಶಸುತ್ತಿ ವಿಕ್ರಮ ಸಾಧಿಸಿದ ಯುವಕ ಪ್ರಜ್ವಲನ ಸಾಧನೆಯನ್ನು ಗುರುತಿಸಿದೆ. ಹಿರೋ ಮೋಟೋ ಕಾರ್ಪ್​ ಸಂಸ್ಥೆಯ ಸಂಸ್ಥಾಪಕ ಡಾ. ಬ್ರಿಜ್​ ಮೋಹನಲಾಲ್​ ಮುಂಜಾಲ್​ ಅವರ 101ನೇ ಜನ್ಮದಿನದ ಸವಿನೆನಪಿಗಾಗಿ ತಯಾರಿಸಿದ 100 ಬೈಕ್​ಗಳಲ್ಲಿ ಅಂದಾಜು 10 ಲಕ್ಷ ರೂ. ಬೆಲೆಯ ಹೀರೋ ಸೆಂಟಿನ್ನಿಯಲ್​ ಬೈಕ್​ಅನ್ನು ಕರ್ನಾಟಕದ ಪ್ರಜ್ವಲನಿಗೆ "ಬೆಸ್ಟ್​ ಕಸ್ಟಮರ್​' ಮಾನದಂಡವಾಗಿ ನೀಡಲಿದೆ. ಉಡುಪಿಯ ಶಕ್ತಿ ಹಿರೋ ಮೋಟಾರ್​ ಸಂಸ್ಥೆಯಲ್ಲಿ ಜೂ.28ರಂದು ಸಂಸ್ಥೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಜ್ವಲನಿಗೆ ಹೊಸ ಬೈಕ್​ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ದೇಶ ಸುತ್ತುವ ಕ್ರೇಜ್​ ಇತ್ತು. ಯಾವುದೇ ಲಕ್ಕಾಗಿ ಪ್ರವಾಸ ಮಾಡಿಲ್ಲ. ತಂದೆಯೂ ಜತೆಯಲ್ಲಿ ಬಂದಿದ್ದರಿಂದ ಇನ್ನಷ್ಟು ಪ್ರದೇಶ ಸುತ್ತಲು ಸಹಾಯವಾಯಿತು. ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಹೋಟೆಲ್​ ಮೆನೇಜ್ಮೆಂಟ್​ ಆ್ಯಂಡ್​ ಟೂರಿಸಂ ಓದುತ್ತಿದ್ದು, ನನ್ನ ಪ್ರವಾಸಕ್ಕೆ ಅವರೂ ರಜಾ ನೀಡಿ ಸಹಕರಿಸಿದರು. ಜಮ್ಮು&ಕಾಶ್ಮೀರದ ಅತ್ಯಂತ ದುರ್ಗಮ ಪ್ರದೇಶ ಹಾಗೂ 17.980 ಫೀಟ್​ ಎತ್ತರದಲ್ಲಿರುವ ಖರ್ದುಂಗ್ಲಾ ಸ್ಥಳಕ್ಕೂ ಬೈಕ್​ನಲ್ಲೇ ತೆರಳಿದ್ದೆ. ನಮ್ಮ ಸಂಚಾರದ ಸಾಧನೆ ಗಮನಿಸಿದ ಹಿರೋ ಹೋಂಡಾ ಸಂಸ್ಥೆಯು ಹೊಸ ಬೈಕ್​ ನೀಡುತ್ತಿರುವುದು ಸಂತಸ ತಂದಿದೆ. | ಪ್ರಜ್ವಲ ಶೆಣೈ. ಶಿರ್ವ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net