

ಖಂಡೇನಹಳ್ಳಿ ಬಸವರಜ್ ಹಿರಿಯೂರು: ಕಲ್ಲಂಗಡಿ, ಕರ್ಬೂಜ ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂಬ ಯುವ ರೈತ ಕನಸಿಗೆ ಮಹಾಮಾರಿ ಕರೊನಾ ಕೊಳ್ಳಿ ಇಟ್ಟಿದೆ.
ತಾಲೂಕಿನ ಹೊಸಕೆರೆ ಗ್ರಾಮದ ಎಚ್.ಧನಂಜಯ ತಮ್ಮ 10 ಎಕರೆ ಜಮೀನಿನಲ್ಲಿ ಬೆಳೆದಿರುವ ಕಲ್ಲಂಗಡಿ-ಕರ್ಬೂಜ ಬೆಳೆ ಕಟಾವಾಗದೆ ಮಣ್ಣು ಪಾಲಾಗಿದೆ. ಬೆಳೆ ಸಾಲ, ಒಡವೆ ಅಡಮಾನವಿಟ್ಟು 8-10 ಲಕ್ಷ ರೂ. ಖರ್ಚು ಮಾಡಿ ಬೆಳೆ ಬೆಳೆಯಾಗಿದೆ.
ಬೆಳೆ ಕಟಾವಿಗೆ ಬಂದ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಂತ್ತಾಗಿದೆ ಎಂದು ರೈತ ಧನಂಜನಯ ಅಳಲು ತೋಡಿಕೊಂಡಿದ್ದಾರೆ.
ಅಗ್ರಿಕಲ್ಚರ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಖಾಸಗಿ ಕಂಪನಿಯಲ್ಲಿ ಉದ್ಯೋಗ, ಕೈತುಂಬಾ ಸಂಬಳ ಸಿಕ್ಕರೂ ಕೃಷಿಯಲ್ಲಿ ಏನಾದರೂ ಸಾಧಿಸಬೇಕು ಎಂದು ಕೆಲಸಕ್ಕೆ ಗುಡ್‌ಬೈ ಹೇಳಿ 25 ಎಕರೆ ಜಮೀನಿನಲ್ಲಿ ನೆಲ್ಲಿಕಾಯಿ, ದಾಳಿಂಬೆ, ರೇಷ್ಮೆ, ಕಲ್ಲಂಗಡಿ, ಕರ್ಬೂಜ, ರಾಗಿ ಮತ್ತಿತರ ಬೆಳೆ ಬೆಳೆದು ಸುತ್ತಲಿನ ರೈತರಿಗೆ ಸ್ಫೂರ್ತಿಯಾಗಿದ್ದಾರೆ.
ಎರಡು ವರ್ಷದ ಹಿಂದೆ ನೆಲ್ಲಿಕಾಯಿ ಫಸಲಿಗೆ ಬಂದ ಸಂದರ್ಭದಲ್ಲಿ ಆಲಿಕಲ್ಲು ಮಳೆಗೆ ನೆಲಕಚ್ಚಿತ್ತು. ಜಲ ಸಂಕಷ್ಟದ ನಡುವೆ ಕಲ್ಲಂಗಡಿ-ಕರ್ಬೂಜ ಈ ಬಾರಿ ಬೆಳೆದರೂ ರೈತನ ದುರದೃಷ್ಟ ಎನ್ನುವಂತೆ ಈ ಬಾರಿಯೂ ಕೃಷಿಲಕ್ಷಿ ್ಮ ಕೈ ಹಿಡಿಯಲಿಲ್ಲ.
ಹೊಸಕೆರೆ ರೈತ ಧನಂಜಯ ಹೇಳಿಕೆ: ಐದಾರು ವರ್ಷ ಸಕಾಲಕ್ಕೆ ಮಳೆ-ಬೆಳೆ ಇಲ್ಲದೆ ರೈತರು ನಷ್ಟ ಅನುಭವಿಸಿ ಸಾಲಗಾರರಾಗಿದ್ದಾರೆ. ಲಾಕ್‌ಡೌನ್ ಘೋಷಣೆಯಿಂದ ಭರಿಸಲಾರದಷ್ಟು ನಷ್ಟವಾಗಿದೆ. ಸರ್ಕಾರ ತೋಟಗಾರಿಕೆ ಬೆಳೆಗಾರರ ರಕ್ಷಣೆ ಮಾಡಬೇಕು.