ಮೊಳಕಾಲ್ಮೂರಿಗೂ ಹರಿಯಲಿದೆ ನೀರು

HYR vvs 30
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಜಿಲ್ಲೆಯ ಜೀವನಾಡಿ ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿ ಮೂಲಕ ಮೊಳಕಾಲ್ಮೂರು ತಾಲೂಕಿಗೆ 0.25 ಟಿಎಂಸಿ ಅಡಿ ನೀರು ಹರಿಸಲು ನೀರಾವರಿ ಇಲಾಖೆ ಆದೇಶ ಹೊರಡಿಸಿದೆ.

ಚಳ್ಳಕೆರೆ ತಾಲೂಕಿನ ವ್ಯಾಪ್ತಿಯ ಹಳ್ಳಿಗಳು ಮೊಳಕಾಲ್ಮೂರು ಕ್ಷೇತ್ರಕ್ಕೆ ಸೇರಿದ್ದು, ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ವಿರೋಧದ ನಡುವೆ ಸಚಿವ ಶ್ರೀರಾಮುಲು-ಶಾಸಕ ರಘುಮೂರ್ತಿ ಅವರು ಜಲಸಂಪನ್ಮೂಲ ಸಚಿವರ ಮೇಲೆ ಒತ್ತಡ ತಂದು, ವಿವಿ ಸಾಗರ ಜಲಾಶಯದ ನೀರನ್ನು ಪಡೆಯಲು ಯಶಸ್ವಿಯಾಗಿದ್ದಾರೆ. ಇದು ಶಾಸಕಿ ಪೂರ್ಣಿಮಾಗೆ ಮುಖಭಂಗವಾದಂತಿದೆ.

ಗಡಿ ದಾಟಲು ಕ್ಷಣಗಣನೆ: ನೀರಾವರಿ ಇಲಾಖೆ ಪರಿಷ್ಕೃತ ಆದೇಶದಂತೆ ಬುಧವಾರ ಸಂಜೆ ಮತ್ತೆ ವೇದಾವತಿ ನದಿಗೆ ನೀರನ್ನು ಹರಿಬಿಡಲಾಗಿದೆ. ಶಿಡ್ಲಯ್ಯನಕೋಟೆ ತಲುಪಿರುವ ನೀರು ಚಳ್ಳಕೆರೆ ಗಡಿ ಪ್ರವೇಶಿಸಲು ಕ್ಷಣಗಣನೆ ಆರಂಭವಾಗಿದೆ. ವೇದಾವತಿ ನದಿ ನೀರು ಕಣ್ತುಂಬಿಕೊಳ್ಳಲು ಚಳ್ಳಕೆರೆ ತಾಲೂಕಿನ ರೈತರು ಚಾತಕ ಪಕ್ಷಿಯಂತೆ ನದಿ ಪಾತ್ರದ ಕಡೆ ದೃಷ್ಟಿ ನೆಟ್ಟಿದ್ದಾರೆ.

ರೈತರ ಹೋರಾಟದ ಕಿಚ್ಚು: ನೀರಾವರಿ ಇಲಾಖೆ ಗುರುವಾರ ವಿವಿ ಸಾಗರದಿಂದ ಮೊಳಕಾಲ್ಮೂರು ತಾಲೂಕಿಗೆ 0.25 ಟಿಎಂಸಿ ಅಡಿ ನೀರು ಹರಿಸಲು ಆದೇಶ ಹೊರಡಿಸಿರುವುದು ತಾಲೂಕಿನ ರೈತರಲ್ಲಿ ಹೋರಾಟದ ಕಿಚ್ಚು ಹಚ್ಚಿದೆ. ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಶುಕ್ರವಾರ ತುರ್ತು ರೈತರ ಸಭೆ ಕರೆದಿದ್ದಾರೆ. ಸಂಸದ ಎ.ನಾರಾಯಣಸ್ವಾಮಿ, ಸಚಿವ ಶ್ರೀರಾಮುಲು ಸೇರಿ ಕೆಲ ಬಿಜೆಪಿ ಮುಖಂಡರು ಚಳ್ಳಕೆರೆಗೆ ಹೆಚ್ಚುವರಿ ನೀರು ಹರಿಸಲು ಬೆಂಬಲಿಸಿದ್ದು, ಶಾಸಕಿ ಪೂರ್ಣಿಮಾ ಅವರನ್ನು ಏಕಾಂಗಿಯಾಗಿಸಿದೆ.

ಧರ್ಮಪುರ ಕೆರೆಗೆ ಹರಿಸಬೇಕು ನೀರು: ಹಿರಿಯೂರು ತಾಲೂಕಿನ ಅತಿ ಹಿಂದುಳಿದ, ಬರಪೀಡಿತ ಧರ್ಮಪುರ ಹೋಬಳಿ ಜನ-ಜಾನುವಾರು ಹನಿ ನೀರಿಗೂ ಪರಿತಪಿಸುತ್ತಿದ್ದು, ತಾಲೂಕನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳು ಧರ್ಮಪುರ ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ, ರೈತರ ಶತಮಾನದ ಹೋರಾಟಕ್ಕೆ ಯಶಸ್ಸು ಸಿಕ್ಕಿಲ್ಲ ಎಂಬ ಆರೋಪಗಳಿವೆ.

ಶಾಸಕಿ ಕೆ.ಪೂರ್ಣಿಮಾ ಹೇಳೀಕೆ: ವಿ.ವಿ.ಸಾಗರದ ನೀರು ಹಂಚಿಕೆ ಬಗ್ಗೆ ಸಭೆ ಕರೆಯುವಂತೆ ನೀರಾವರಿ ಸಚಿವರ ಬಳಿ ಮನವಿ ಮಾಡಲಾಗಿತ್ತು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸಹಮತ ವ್ಯಕ್ತಪಡಿಸಿದ್ದರು, ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿಗೆ ನೀರು ಹರಿಸುವುದರಲ್ಲಿ ರಾಜಕೀಯ ಕೆಲಸ ಮಾಡಿದೆ. ಈ ಬಗ್ಗೆ ಸಿಎಂ ಗಮನಕ್ಕೆ ತರಲಾಗಿದೆ.

ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಹೇಳಿಕೆ: ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಗೆ ಶಾಶ್ವತ ಕುಡಿವ ನೀರಿನ ಸೌಲಭ್ಯ ಕಲ್ಪಿಸಲು ಸ್ಥಳೀಯ ಶಾಸಕರು ಇಚ್ಛಾಶಕ್ತಿ ಪ್ರದರ್ಶಿಸಬೇಕು, ವಿವಿ ಸಾಗರದಿಂದ ಧರ್ಮಪುರ ಕೆರೆಗೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net