ಆಂಧ್ರ ಗಡಿವರೆಗೆ ನೀರು ಹರಿಸಲು ವಿರೋಧ

VV Sagara
Published on

ಹಿರಿಯೂರು: ವಿವಿ ಸಾಗರ ಜಲಾಶಯದಿಂದ ಆಂಧ್ರ ಗಡಿಯವರೆಗೆ ನೀರು ಹರಿಸಿದರೆ ರೈತರ ಸಂಘದ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಚಳ್ಳಕೆರೆ-ಪಾವಗಡ ತಾಲೂಕಿನ ಜನಪ್ರತಿನಿದಿಗಳು, ರೈತರ ಹೋರಾಟಕ್ಕೆ ಮಣಿದಿರುವ ಸರ್ಕಾರ ವಿವಿ ಸಾಗರ ಜಲಾಶಯದಿಂದ 0.25 ಟಿಎಂಸಿ ಅಡಿ ನೀರನ್ನು ವೇದಾವತಿ ನದಿಗೆ ಹರಿಸಲು ಆದೇಶಿಸಿರುವುದು ಸ್ವಾಗತಾರ್ಹ. ಆದರೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಿಟ್ಟರೆ ತಾಲೂಕಿನ ರೈತರು ತಿವ್ರ ಹೋರಾಟ ನಡೆಸಬೇಕಾದಿತು ಎಂದು ಎಚ್ಚರಿಸಿದ್ದಾರೆ.

ಹಿರಿಯೂರು-ಚಿತ್ರದುರ್ಗ ತಾಲೂಕಿನ ರೈತರ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಫಲಪ್ರದವಾಗಿ ಅಲ್ಪ-ಸ್ವಲ್ಪ ನೀರು ಜಲಾಶಯಕ್ಕೆ ಹರಿದಿದೆ. ವಿವಿ ಸಾಗರಕ್ಕೆ ನಿಗದಿಯಾಗಿದ್ದು 5 ಟಿಎಂಸಿ ಅಡಿ ನೀರನ್ನು 2 ಟಿಎಂಸಿಗೆ ಕಡಿತಗೊಳಿಸಿ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ.

ವಿವಿ ಸಾಗರಕ್ಕೆ 10 ಟಿಎಂಸಿ ಅಡಿ ನೀರು ಮೀಸಲಿರಿಸಿ ಜಿಲ್ಲೆಯ ಜನರಿಗೆ ಶಾಶ್ವತ ಕುಡಿವ ನೀರಿನ ಸೌಲಭ್ಯಕ್ಕೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕು. ಆಂಧ್ರದ ಗಡಿವರೆಗೆ ನೀರು ಹರಿಸಬೇಕು ಎಂದು ಕೇಳುವುದು ಸರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net