

ಹಿರಿಯೂರು: ಕರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರು, ಪೊಲೀಸರು, ಆಶಾ ಕಾರ್ಯರ್ತೆಯರು ಹಾಗೂ ಪೌರ ಕಾರ್ಮಿಕರ ಸೇವೆ ದೇವರ ಕಾರ್ಯಕ್ಕೆ ಸಮಾನ ಎಂದು ಶ್ವೇತಾಂಬರ್ ಯುವಕ ಸಂಘದ ಸದಸ್ಯ ಕಮಲೇಶ್ ಬಣ್ಣಿಸಿದರು.
ನಗರ ಪೊಲೀಸ್ ಠಾಣೆ ಸಿಬ್ಬಂದಿಗೆ ಶನಿವಾರ ಹಣ್ಣು, ನೀರು ಇತರೆ ತಿನಿಸು ವಿತರಣೆ ಮಾಡಿ ಮಾತನಾಡಿ, ಜೀವದ ಹಂಗು ತೊರೆದು ವೈದ್ಯರು, ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಹಗಲು-ರಾತ್ರಿ ಪೊಲೀಸರು, ಪೌರಕಾರ್ಮಿಕರು ಸೇರಿ ವಿವಿಧ ಇಲಾಖೆ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಇವರಿಗೆ ಜನರ ಸಹಕಾರ ಬಹಳ ಅಗತ್ಯ ಎಂದರು.
ದೇಶದ ಪ್ರತಿಯೊಬ್ಬ ಪ್ರಜೆ ಕರೊನಾ ವಿರುದ್ಧ ಹೋರಾಡುತ್ತಿರುವ ಸರ್ಕಾರಿ ನೌಕರರ ಸೇವೆಯನ್ನು ಗೌರವಿಸಿ, ಮಾನವೀಯತೆ ಮೆರೆಯಬೇಕು. ಅವರಂತೆ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೂ ಸಂಕಷ್ಟದಲ್ಲಿರುವ ಬಡವರ ನೆರವಿಗೆ ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ಎಎಸ್‌ಐ ರಾಘವೇಂದ್ರರೆಡ್ಡಿ ಮಾತನಾಡಿ, ಸಂಘ ಸಂಸ್ಥೆಗಳ ಮಾನವೀಯ ಕಾರ್ಯ ಶ್ಲಾಘನೀಯ. ಪೊಲೀಸ್ ಸಿಬ್ಬಂದಿ ಅವಿರತ ಶ್ರಮಕ್ಕೆ ಸಹಕಾರ ನೀಡುವ ಎಲ್ಲ ಸಹೃದಯ ಅಭಿಮಾನಿಗಳ ಪ್ರೀತಿ, ವಿಶ್ವಾಸ ನಮ್ಮ ಕಾರ್ಯ ಒತ್ತಡವನ್ನು ದೂರಾಗಿಸಿ ಸಾರ್ಥಕಭಾವ ಮೂಡುವಂತೆ ಮಾಡುತ್ತದೆ ಎಂದು ತಿಳಿಸಿದರು.
ಸಮಾಜ ಸೇವಕ ಕೇಶವಮೂರ್ತಿ, ಜೈನ್ ಯುವಕ ಸಂಘದ ರಾಜ್‌ಕುಮಾರ್, ವಿಜಯ್, ಅನಿಲ್, ರಾಣ್‌ಮಲ್, ಮದನ್, ಜೀತ್ಮಲ್, ಮೊನೀಶ್, ಮಹಾವೀರ್, ದಲೀಚಂದ್, ಮಫತ್ ಲಾಲ್, ಪೊಲೀಸ್ ಸಿಬ್ಬಂದಿ ಕುಮಾರ್, ಪ್ರವೀಣ್, ಸಿದ್ದಲಿಂಗ, ಮಂಜುಳಾ, ಲತಾ, ಅಸ್ಲಾಂ ಭಾಷಾ, ಕುಮಾರಸ್ವಾಮಿ, ತಿಮ್ಮರಾಯಪ್ಪ, ವಸಂತ್, ಶ್ರೀನಿವಾಸ್ ಇತರರಿದ್ದರು.