ಪರಂಪರೆ ಬಗ್ಗೆ ಜಾಗೃತಿ ಮೂಡಿಸಲು ಮೈಸೂರಿನಲ್ಲಿ ಪಾರಂಪರಿ ನಡಿಗೆ

Heritage Walk in Mysore to create awareness about heritage
Published on

ಮೈಸೂರು: ನಗರದಲ್ಲಿ ನಮ್ಮ ಹಿರಿಯರು ಕಷ್ಟ ಪಟ್ಟು ನಿರ್ಮಾಣ ಮಾಡಿರುವಂತಹ ಹಲವಾರು ಪಾರಂಪರಿಕ ಕಟ್ಟಡಗಳಿದ್ದು, ಅವುಗಳನ್ನು ಸಂರಕ್ಷಿಸುವ ಕರ್ತವ್ಯ ಸರ್ಕಾರದ ಜತೆಗೆ ಯುವ ಪೀಳಿಗೆಯ ಮೇಲೂ ಇದೆ ಎಂದು ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಆಯುಕ್ತ ದೇವರಾಜು ಹೇಳಿದರು.

ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಪಾರಂಪರಿಕ ನಡಿಗೆಗೆ ಚಾಲನೆ ನೀಡಿ ಮಾತನಾಡಿ, ಟಾಂಗ ಸವಾರಿ, ಬೈಕ್ ಸವಾರಿ ಹಾಗೂ ಪಾರಂಪರಿಕ ನಡಿಗೆಯಿಂದ ಪರಂಪರೆ ಉಳಿಸಲಾಗುವುದಿಲ್ಲ. ಈ ನಡಿಗೆಗಳು ಹಾಗೂ ಸವಾರಿಗಳು ಯುವಜನರಲ್ಲಿ ಅರಿವನ್ನು ಮೂಡಿಸಲು ಆಯೋಜಿಸುವ ಒಂದು ಕಾರ್ಯಕ್ರಮವಾಗಿದೆ. ಇದರಲ್ಲಿ ತಿಳಿದುಕೊಂಡಂತಹ ಅಂಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಪಾರಂಪರಿಕ ಕಟ್ಟಡಗಳು, ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಸಂರಕ್ಷಣೆಗೆ ಒಳಪಡದ ಹಲವಾರು ಕಟ್ಟಡಗಳು ಹಾಗೂ ವಾಸ್ತು ಶಿಲ್ಪಗಳಿವೆ. ಇದರ ಬಗ್ಗೆ ಎಷ್ಟೋ ಜನರಿಗೆ ಮಾಹಿತಿಯೇ ಇರುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಲು ಇಲಾಖೆಯ ವತಿಯಿಂದ ಹಲವಾರು ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅದರಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ನಮ್ಮೊಂದಿಗೆ ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗಂಗಾಧರ್ ಮಾತನಾಡಿ, ಪ್ರಪಂಚದ ಯಾವುದೇ ಸ್ಥಳಕ್ಕೆ ಹೋದರು ಮೈಸೂರು ಎಂದಾಕ್ಷಣ ನೆನಪಾಗುವುದೇ ಇಲ್ಲಿನ ಅರಮನೆ ಮತ್ತು ಪಾರಂಪರಿಕ ಕಟ್ಟಡಗಳು. ಅಂತಹ ವಿಶ್ವ ವಿಖ್ಯಾತ ಪರಂಪರೆ, ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆ ಯುವ ಜನರಲ್ಲಿ ಅರಿವನ್ನು ಮೂಡಿಸಲು ಅವರಿಗೆ ಪರಂಪರೆಯ ಮಹತ್ವವನ್ನು ತಿಳಿಸಲು ಇಂದು ಪಾರಂಪರಿಕ ನಡಿಗೆ ಆಯೋಜಿಸಲಾಗಿದ್ದು, ಇಲ್ಲಿ ಕಲಿತಂತಹ ವಿಷಯಗಳನ್ನು ಇತರರೊಂದಿಗೆ ಹಂಚಿಕೊಂಡು ಅವರಲ್ಲಿಯೂ ಪರಂಪರೆ ಸಂಸ್ಕೃತಿ ಪಾರಂಪರಿಕ ಕಟ್ಟಡಗಳ ಬಗ್ಗೆ ಅವುಗಳ ಉಳಿವು ಹಾಗೂ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ನಮ್ಮ ಹಿರಿಯರಾದ ಮೈಸೂರು ಸಂಸ್ಥಾನದ ರಾಜರು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇದರ ಪ್ರತಿರೂಪವಾಗಿ ಇಂದು ಮೈಸೂರಿನಲ್ಲಿ ಹಲವಾರು ವಿಶಿಷ್ಟ ಮತ್ತು ಸುಂದರ ಕಟ್ಟಡಗಳು ಇವೆ. ಅದರ ಮಹತ್ವವನ್ನು ತಿಳಿದುಕೊಳ್ಳಬೇಕು. ಜಗನ್ಮೋಹನ ಅರಮನೆ, ಮೈಸೂರು ವೈದ್ಯಕೀಯ ಕಾಲೇಜು, ಕೆ.ಆರ್. ಆಸ್ಪತ್ರೆ ಸೇರಿದಂತೆ ಹಲವಾರು ಪಾರಂಪರಿಕ ಕಟ್ಟಡಗಳು ಇದ್ದು, ಅವುಗಳನ್ನು ಉಳಿಸಿಕೊಂಡಿ ಹೋಗಬೇಕು ಎಂದರು.

ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಕುಲಪತಿ ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ವಿಶ್ವಕ್ಕೆ ಪಾರಂಪರಿಕ ಜ್ಞಾನವನ್ನು ತಂದುಕೊಟ್ಟತಹ ನಾಡು ನಮ್ಮ ಮೈಸೂರು. ಪಾರಂಪರಿಕ ಕಟ್ಟಡಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಇದನ್ನು ತಿಳಿದು ಯುವ ಜನರು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.

ಪಾರಂಪರಿಕ ನಡಿಗೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ 350 ಕ್ಕೂ ಹೆಚ್ಚಿನ ಜನ ಭಾಗವಹಿಸಿದ್ದರು.ಪಾರಂಪರಿಕ ನಡಿಗೆಯು ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ ದೊಡ್ಡ ಗಡಿಯಾರ, ಮೇಸನ್ ಕ್ಲಬ್, 10ನೇ ಚಾಮರಾಜ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, 4ನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೃಷ್ಣರಾಜೇಂದ್ರ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜು,ಸರ್ಕಾರಿ ಆಯುರ್ವೇದ ಕಾಲೇಜು, ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್, ಗಾಂಧಿ ವೃತ್ತ ಮೂಲಕ ಸಾಗಿ ಪುರಭವನದಲ್ಲಿ ಅಂತ್ಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net