

ಹಾನಗಲ್ಲ: ನಮ್ಮ ಐತಿಹಾಸಿಕ ಪರಂಪರೆ ಹಾಗೂ ಸಂಪ್ರದಾಯಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾಡಹಬ್ಬವನ್ನು ನಮ್ಮ ಧಾರ್ವಿುಕ ಹಾಗೂ ಸಂಸ್ಕೃತಿಯ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು ಎಂದು ತಹಸೀಲ್ದಾರ್ ಎಸ್. ರೇಣುಕಾ ಹೇಳಿದರು.
ಪಟ್ಟಣದ ಫ್ರೆಂಡ್ಸ್ ಅಸೋಸಿಯೇಶನ್ ಸಭಾಭವನದಲ್ಲಿ ನಾಡಹಬ್ಬ ಉತ್ಸವ ಸಮಿತಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡದೇವಿ ಭುವನೇಶ್ವರಿ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.
ಹಾನಗಲ್ಲಿಗೆ ಪಾರಂಪರಿಕ ಇತಿಹಾಸವಿದೆ. ಇಲ್ಲಿನ ನಾಡಹಬ್ಬಕ್ಕೆ 87 ವರ್ಷಗಳ ಇತಿಹಾಸವಿರುವುದು ನಮ್ಮ ಹೆಮ್ಮೆಯಾಗಿದೆ. ನಾಡದೇವಿ ನಮ್ಮೆಲ್ಲರಲ್ಲಿ ಸೌಹಾರ್ದ, ಒಗ್ಗಟ್ಟು, ಸಾಮರಸ್ಯ ಮೂಡಿಸಿ ಎಲ್ಲರೂ ಒಟ್ಟಾಗಿ ಬದುಕುವಂಥ ವಾತಾವರಣ ಕರುಣಿಸಲಿ ಎಂದು ಪ್ರಾರ್ಥಿಸೋಣ ಎಂದರು.
ಪುರಸಭೆ ಅಧ್ಯಕ್ಷೆ ಮಮತಾ ಆರೇಗೊಪ್ಪ ಮಾತನಾಡಿ, ರಾಜ್ಯದಲ್ಲಿ ಮೈಸೂರು ದಸರಾ ನಂತರ ಹಾನಗಲ್ಲ ನಾಡಹಬ್ಬ ಎಂದು ಈ ಮೊದಲು ಹೆಸರುವಾಸಿಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಧಾರ್ವಿುಕ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ಆಚರಿಸುವಂತಾಗಿದೆ. ನಮ್ಮ ನಾಡಹಬ್ಬ ಮತ್ತೆ ಮೊದಲಿನಂತೆ ಅರ್ಥಪೂರ್ಣವಾಗಿ, ಹೊಸತನ ಮೈಗೂಡಿಸಿಕೊಂಡು ಆಚರಿಸುವಂತಾಗಬೇಕು. ಇದಕ್ಕಾಗಿ ಎಲ್ಲರೂ ಪಕ್ಷ, ಜಾತಿ ಎಲ್ಲವನ್ನೂ ಮರೆತು ಕೈಜೋಡಿಸಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ, ಮುಖ್ಯಾಧಿಕಾರಿ ವೈ.ಕೆ. ಜಗದೀಶ ಉದಯ ನಾಸಿಕ, ಕೆ.ಎಲ್. ದೇಶಪಾಂಡೆ ಮಾತನಾಡಿದರು. ಮಂಜಣ್ಣ ನಾಗಜ್ಜನವರ, ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ರವಿಚಂದ್ರ ಪುರೋಹಿತ, ಶಿವಯೋಗಿ ಅರಳೇಲಿಮಠ, ಕೃಷ್ಣಾ ಪೂಜಾರ, ಪ್ರೊ. ಸಿ. ಮಂಜುನಾಥ, ಸೋಮಶೇಖರ ಕೋತಂಬರಿ, ಮನೋಜ ಕಲಾಲ, ಅಶೋಕ ಆರೇಗೊಪ್ಪ, ರಾಜೇಶ ಗುಡಿ, ಪ್ರಶಾಂತ ಮುಚ್ಚಂಡಿ, ಶರಶ್ಚಂದ್ರ ದೇಸಾಯಿ, ಎಂ.ಎಲ್. ಕಾಮನಹಳ್ಳಿ, ಪ್ರಶಾಂತ ಪೂಜಾರ, ಡಿ.ಜಿ. ಕುಲಕರ್ಣಿ, ಸಂಜು ಬೇದ್ರೆ, ಸುಧಾಬಾಯಿ ದೇಶಪಾಂಡೆ, ಸುರೇಖಾ ಕುಲಕರ್ಣಿ ಉಪಸ್ಥಿತರಿದ್ದರು. ಗಿರೀಶ ದೇಶಪಾಂಡೆ, ರವಿ ಪೋತದಾರ ಕಾರ್ಯಕ್ರಮ ನಿರ್ವಹಿಸಿದರು.