ಪಾರಂಪರಿಕ ತಾಣ ಪರಿಶೀಲನೆ

YLP samti
Published on

ಯಲ್ಲಾಪುರ: ತಾಲೂಕು ಜೀವ ವೈವಿಧ್ಯ ನಿರ್ವಹಣಾ ಸಮಿತಿಯಿಂದ ಮಾನ್ಯತೆ ನೀಡಿ ಗುರುತಿಸಲಾದ ತಾಲೂಕಿನ ನೈಸರ್ಗಿಕ ಜೀವವೈವಿಧ್ಯ ಪಾರಂಪರಿಕ ತಾಣಗಳಿಗೆ ಸಮಿತಿಯ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಹುತ್ಕಂಡದ ಸೀತಾ ಅಶೋಕವನ, ವಸಹಸ್ರಳ್ಳಿಯ ಮುಂಡಿಗೆಕೆರೆ, ಕರಿಯವ್ವನಗುಂಡಿಯ ಪಾರಂಪರಿಕ ಬೀಟೆ ವೃಕ್ಷ ಹಾಗೂ ರಾಜ್ಯದಲ್ಲೇ ಅಪರೂಪ ಮತ್ತು ವಿಶಿಷ್ಟವಾದ ಅಳಿವನಂಚಿನಲ್ಲಿರುವ ದೇಹಳ್ಳಿ ಕಾಡಿನಲ್ಲಿದ್ದ ಮರದರಶಿಣ ಬಳ್ಳಿಯ ಪ್ರದೇಶಗಳಿಗೆ ತಂಡದ ಸದಸ್ಯರು ಭೇಟಿ ನೀಡಿದರು. ಅವುಗಳ ವಿಶೇಷತೆ, ಉಪಯೋಗ, ಸಂರಕ್ಷಣೆ ಹೇಗೆ ಏನು? ಎಂಬ ಬಗ್ಗೆ ಯೋಜನೆ ರೂಪಿಸಿ ಕಾರ್ಯಗತಗೊಳಿಸುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿತು.

ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಅಪರೂಪವೆನಿಸುವ ಮತ್ತು ಉಪಯೋಗಿ ಜೀವ ಸಂಪತ್ತನ್ನು ರಕ್ಷಣೆ ಮಾಡಿದರೆ ಮುಂದಿನ ತಲೆಮಾರಿಗೆ ಕೊಡಬಹುದು. ಎಷ್ಟೋ ಸಸ್ಯ ಪ್ರಭೇದಗಳು ಅಳಿವಿನಂಚಿನಲ್ಲಿದ್ದು ಅವುಗಳ ಉಳಿವಿಗೆ ಪ್ರಯತ್ನಿಸಿ ಕ್ರಮ ಕೈಗೊಳ್ಳಬೇಕಿದೆ. ಅತ್ಯಂತ ಉಪಯುಕ್ತವಾದ ಮರದರಶಿಣ ಬಳ್ಳಿಯ ಪ್ರಭೇದ ಉಳಿಸಲು ಯೋಜನೆ ರೂಪಿಸಬೇಕು. ಈಗಾಗಲೇ ಕೈಗಾ ವಿದ್ಯುತ್ ತಂತಿ ಮಾರ್ಗದ ಸಂಬಂಧ ಒಂದಷ್ಟು ಬಳ್ಳಿಗಳು ನಾಶವಾಗಿವೆ. ಇರುವುದನ್ನು ಉಳಿಸಿ ಬೆಳೆಸಲು ಮತ್ತು ಕಳ್ಳ ಸಾಗಣೆ ತಡೆಯಲು ಅರಣ್ಯ ಇಲಾಖೆ,ಗ್ರಾ.ಪಂ, ಸಮಿತಿ, ಹಾಗೂ ಜನಪ್ರತಿನಿಧಿಗಳು ನಿಗಾವಹಿಸಬೇಕು ಎಂದರು.

ಸಹಸ್ರಳ್ಳಿ ಕೆರೆ ಒತ್ತುವರಿಯಾಗದ ಹಾಗೆ ತಡೆಯುವ ಬಗ್ಗೆ ಮತ್ತು ಅಲ್ಲಿಗೆ ಬರುವ ಅಪರೂಪದ ಪಕ್ಷಿಸಂಕುಲಗಳ ಸಂರಕ್ಷಣೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

ಡಿಸಿಎಫ್ ಹರ್ಷ ಭಾನು, ಜೀವ ವೈವಿಧ್ಯ ಸಮಿತಿಯ ಸದಸ್ಯರಾದ ನರಸಿಂಹ ಸಾತೊಡ್ಡಿ, ಟಿ.ಆರ್. ಹೆಗಡೆ, ಕೆ.ಎಸ್. ಭಟ್ಟ ಆನಗೋಡ, ಚಂದಗುಳಿ ಗ್ರಾ.ಪಂ ಅಧ್ಯಕ್ಷೆ ಶಿಲ್ಪಾ ರವಿ ನಾಯ್ಕ, ಸದಸ್ಯರಾದ ಆರ್.ಎಸ್. ಭಟ್ಟ, ನೇತ್ರಾವತಿ ಹೆಗಡೆ, ಮದನೂರು ಗ್ರಾ.ಪಂ ಅಧ್ಯಕ್ಷ ರಾಜೇಶ ತಿನೇಕರ್, ದೇಹಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀಪತಿ ಮುದ್ದೆಪಾಲ್, ಉಪಾಧ್ಯಕ್ಷ ಮಂಜುನಾಥ ಗುಮ್ಮಾನಿ, ಎಸಿಎಫ್ ಹಿಮವತಿ ಭಟ್ಟ, ತಾಪಂ ಇಒ ರಾಜೇಶ ಧನವಾಡಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net