

ಭರತ್ ಸೊರಕೆ ಮಂಗಳೂರು
ಪಿಲಿಕುಳ ಸಸ್ಯಕಾಶಿ ಪಾರಂಪರಿಕ ಗಿಡಮೂಲಿಕೆ ಸಸ್ಯಗಳ ಸಂಗ್ರಹ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿನ 60 ಎಕರೆ ಪ್ರದೇಶದಲ್ಲಿ ಪಶ್ಚಿಮಘಟ್ಟದ ಹಾಗೂ ಅಳಿವಿನಂಚಿನಲ್ಲಿರುವ 260 ಪ್ರಭೇದದ ಸುಮಾರು 60 ಸಾವಿರ ವೈವಿಧ್ಯಮಯ ಗಿಡ, ಮರಗಳಿವೆ. ಈ ಪೈಕಿ 10 ಎಕರೆ ಪ್ರದೇಶ ವಿನಾಶದಂಚಿನಲ್ಲಿರುವ 430 ಪ್ರಭೇದದ ಪಾರಂಪರಿಕ ಔಷಧೀಯ ಸಸ್ಯಗಳ ಅಭಿವೃದ್ಧಿಗೆ ಮೀಸಲು.
ಸಹಜ ಪ್ರದೇಶದಲ್ಲಿ ಬೆಳೆಯುವಂತೆ ಔಷಧೀಯ ಸಸ್ಯಗಳನ್ನು ಅಭಿವೃದ್ಧಿ ಮಾಡುತ್ತಿರುವುದು ಇಲ್ಲಿನ ವಿಶೇಷ. ಒಂದೇ ಸ್ಥಳದಲ್ಲಿ ವೈವಿಧ್ಯಮಯ ಸಸ್ಯಗಳು ಕಾಣಸಿಗುವುದರಿಂದ ದೇಶದ ವಿವಿಧೆಡೆಗಳಿಂದ ಬರುವ ಸಂಶೋಧನಾ ವಿದ್ಯಾರ್ಥಿಗಳಿಗೆ, ಸಸ್ಯ ಪ್ರೇಮಿಗಳಿಗೆ ಪಿಲಿಕುಳದ ವೃಕ್ಷಮಂಡಲ ಮಾಹಿತಿ ಕೇಂದ್ರ. ಆಸುಪಾಸಿನ ಹಾಗೂ ಹೊರಜಿಲ್ಲೆಯ ಆಯುರ್ವೇದ ಕಾಲೇಜುಗಳು, ಫಾರ್ಮಸಿಗಳಿಗೆ ಇಲ್ಲಿನ ಔಷಧ ಸಸ್ಯಗಳ ನರ್ಸರಿ ಮೂಲಕ ಗಿಡಗಳ ವಿನಿಮಯ, ಮಾರಾಟವಿದೆ.
ಕೊಳ ರಚನೆ: ಔಷಧ ವನದಲ್ಲಿ ಚಿಟ್ಟೆ, ಪ್ರಾಣಿ, ಪಕ್ಷಿಗಳನ್ನು ಆಕರ್ಷಿಸಲು 13 ಸಣ್ಣ ಸಣ್ಣ ಕೊಳಗಳನ್ನು ನಿರ್ಮಿಸಲಾಗಿದೆ. ಇವುಗಳ ಬದುಗಳಲ್ಲಿ ಅಳಿವಿನಂಚಿನಲ್ಲಿರುವ ನೀರಿನಂಚಿನಲ್ಲಿ ಬೆಳೆಯುವ ವಿವಿಧ ಬಗೆಯ ಗುಬ್ಬಚ್ಚಿ ಕೇದಗೆ, ಕಮಲ, ಪಾಚಿ ಗಿಡಗಳಿವೆ. ಸ್ಥಳ ವೀಕ್ಷಣೆಗೆ ಅನುಕೂಲವಾಗುವಂತೆ ಸಣ್ಣ ಕಾಲು ದಾರಿ ನಿರ್ಮಿಸಿದ್ದು, ಉಳಿದ ಪ್ರದೇಶವನ್ನು ಸಹಜವಾಗಿ ಬೆಳೆಯಲು ಬಿಡಲಾಗಿದೆ. ಪುಟ್ಟ ಜಾಗದಲ್ಲಿ ದಟ್ಟ ಕಾಡಿನೊಳಗೆ ನಡೆದಾಡಿದ ಅನುಭವ ಇಲ್ಲಿನದ್ದು.
ಅಪೂರ್ವ ಸಂಗ್ರಹ: ಗಜಕರ್ಣಪಾಲಶ, ಚಂದ್ರಹೂವಿನ ಬಳ್ಳಿ, ಸುರಗಿ, ಬಕುಳ, ಪುತ್ರಂಜೀವ, ಜಾಲರಿ ಮರ, ದುರ್ವಾಸನೆ ಮರ, ಕ್ರಿಸ್ಪ, ಆರೋಗ್ಯ ಪಾಚ, ಹಾಡೆ ಬಳ್ಳಿ, ಸೌಗಂಧಿಕ ಪುಷ್ಪ, ಕಪ್ಪು ರಾಳ, ಕಾಡು ರುದ್ರಾಕ್ಷಿ, ಅಂಕೋಲೆ, ರೆಂಜೆ, ಸುರಗಿ, ನೀರ್‌ಕುಕ್ಕು, ನಾಗವಲ್ಲಿ ಬಳ್ಳಿ, ಮಣಿಪುರ ಅಮೃತ ಬಳ್ಳಿ, ಕರ್ಪೂರ ಮರ, ಜಗಳಗಂಟಿ, ಅರದಾಳ, ದಾರುಹರಿದ್ರ, ಜಾನಕಿ ಆರೆಲ್‌ಪತ್ರ, ಸೌಗಂಧಿಕ ಪುಷ್ಪ, ಕರುಳೆಂಕಿ, ತ್ರಿವೃತ್, ಕಪ್ಪುರಾಳ, ಕರಿ ಅರಸಿನ, ನಾಗಲಿಂಗ ಪುಷ್ಪ, ಕಸ್ತೂರಿ ಬೆಂಡೆ, ಕಚೋರ, ರಾಮ ತುಳಸಿ.. ಹೀಗೆ ಪಿಲಿಕುಳದಲ್ಲಿ ಕಾಪಾಡಿದ ಔಷಧ ಸಸ್ಯಗಳ ಪಟ್ಟಿ ಬೆಳೆಯುತ್ತದೆ. ವೇದದಲ್ಲಿ ಉಲ್ಲೇಖಿಸಿದ 20 ಬಗೆಯ ಔಷಧ ಸಸ್ಯಗಳು, 3 ವಿದೇಶಿ ಗಿಡಮೂಲಿಕೆ, ಶ್ಯಾಂಪೂವಿನಂತೆ ಬಳಕೆ ಮಾಡುವ 13 ಬಗೆಯ ಗಿಡಗಳಿವೆ.
ಗಿಡಗಳ ವಿವರಣೆ ಅಗತ್ಯ: ಇಲ್ಲಿ ಬೆಳೆಸಿದ ಗಿಡಮೂಲಿಕೆಗಳ ಎದುರು ವೈಜ್ಞಾನಿಕ ಹೆಸರು, ಉಪಯೋಗ ಮೊದಲಾದ ವಿವರಣೆ ನೀಡುವ ಮಾಹಿತಿ ಫಲಕ ಅಗತ್ಯವಿದೆ. ಸಸ್ಯಗಳ ಎದುರು ಕ್ಯುಆರ್‌ಕೋಡ್ ಅಂಟಿಸಿ ಹೆಚ್ಚಿನ ವಿವರಣೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಿದರೆ ಸಂದರ್ಶಕ ಮೊಬೈಲ್ ಮೂಲಕವೇ ಹೆಚ್ಚು ಮಾಹಿತಿ ಪಡೆಯಲು ಅನುಕೂಲವಾಗಬಹುದು.
ಜೈವಿಕ ಬೇಲಿಯಲ್ಲೇ ಗಿಡ ಮೂಲಿಕೆ: ಹಿಂದೆ ಹಳ್ಳಿಗಳಲ್ಲಿ ಬೇಲಿಯಲ್ಲೇ ಗಿಡ ಮೂಲಿಕೆ ಗಿಡಗಳಿದ್ದವು. ಆಧುನಿಕ ಬೇಲಿ ಪದ್ಧತಿಗಳು ಬಂದ ಬಳಿಕ ಪೊದರು ಬೇಲಿ ನಾಶವಾದವು. ಇದನ್ನು ಮರು ಪರಿಚಯಿಸುವುದಕ್ಕೋಸ್ಕರ ಔಷಧ ವನದ ಮೇಲ್ವಿಚಾರಕ ಉದಯಕುಮಾರ್ ಶೆಟ್ಟಿ ಅವರು ನಡಿಗೆ ದಾರಿಯ ಕಿಲೋಮೀಟರ್ ದೂರ 131 ಪ್ರಭೇದದ ಗಿಡ ಮೂಲಿಕೆಗಳನ್ನು ನೆಟ್ಟು ಜೈವಿಕ ಬೇಲಿ ರಚಿಸಿದ್ದಾರೆ. ಆಧುನಿಕ ಆಲಂಕಾರಿಕಾ ಗಿಡಗಳ ಬದಲು ಗಿಡಮೂಲಿಕೆ ಗಿಡಗಳನ್ನೇ ಸಮೃದ್ಧವಾಗಿ ನೆಟ್ಟು ಬೆಳೆಸಿದರೆ ಸೌಂದರ್ಯದ ಜತೆಗೆ ಗಿಡಗಳನ್ನು ಉಳಿಸಿದಂತೆ ಆಗುತ್ತದೆ ಎನ್ನುತ್ತಾರೆ ಉದಯಕುಮಾರ್ ಶೆಟ್ಟಿ.
ಪಿಲಿಕುಳ ಸಸ್ಯಧಾಮ ಮತ್ತು ಔಷಧ ವನ ಸಸ್ಯಶಾಸ್ತ್ರ ಅಧ್ಯಯನ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾಹಿತಿ ಕೇಂದ್ರ. ಶಿಕ್ಷಣ ಸಂಸ್ಥೆಗಳು ಸಂಪೂರ್ಣ ತೆರೆದು ಕಾರ್ಯಾಚರಣೆ ಆರಂಭವಾದ ಬಳಿಕ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಸಸ್ಯಕ್ಷೇತ್ರಕ್ಕೆ ಸೆಳೆಯಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ವೆಂಕಟೇಶ್ ಜಿ. ಆಯುಕ್ತರು, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು