ಹಳೇ ಆವರಣದಲ್ಲೇ ನೂತನ ಜಿಲ್ಲಾಡಳಿತ ಕಚೇರಿ

1manju5
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಹಳೇ ಜಿಲ್ಲಾಡಳಿತ ಕಚೇರಿ ಆವರಣದಲ್ಲೇ ನೂತನ ಜಿಲ್ಲಾಡಳಿತ ಭವನ ನಿರ್ಮಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡು, ಶತಮಾನ ಪೂರೈಸಿರುವ ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಡಳಿತ, ಜಿಪಂ ಹಳೆ ಕಟ್ಟಡಗಳನ್ನು ‘ಪಾರಂಪರಿಕ ಕಟ್ಟಡ’ ಪಟ್ಟಿ ಸೇರ್ಪಡೆಗೆ ಸರ್ಕಾರ ಮುಂದಾಗಿದೆ.

ಬೆಳಗಾವಿ, ಕಿತ್ತೂರು ಭಾಗಗದಲ್ಲಿ 150 ವರ್ಷ ಪೂರೈಸಿದ ಪ್ರಮುಖ ಕಟ್ಟಡಗಳ ಪಟ್ಟಿಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಡಳಿತ ಕಟ್ಟಡಗಳು ಕೂಡ ಇವೆ. ಇಂತಹ ಕಟ್ಟಡಗಳನ್ನು ತೆಗೆದು ಹೊಸ ಕಟ್ಟಡ ನಿರ್ಮಿಸುವುದರಿಂದ ನಮ್ಮ ಇತಿಹಾಸವನ್ನು ನಾವೇ ನಾಶಪಡಿಸಿಕೊಂಡಂತೆ. ಈ ಹಿನ್ನೆಲೆ ಮುಂದಿನ ಪೀಳಿಗೆಗೆ ನಮ್ಮ ಇತಿಹಾಸ ಪರಂಪರೆ ಪರಿಚಯಿಸುವ ಸಲುವಾಗಿ ಇಂತಹ ಪಾರಂಪರಿಕ ಕಟ್ಟಡಗಳನ್ನು ಉಳಿಸಿ ಸಂರಕ್ಷಿಸಬೇಕು ಎಂದು ಇತಿಹಾಸ ತಜ್ಞರು, ಸಾಹಿತಿಗಳು, ಹೋರಾಟಗಾರರು ಮನವಿಗೆ ಸರ್ಕಾರ ಸ್ಪಂದಿಸಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಹಳೆ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನೂತನ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಇದಕ್ಕೂ ಮೊದಲು ಬೆಳಗಾವಿ ತಾಲೂಕಿನ ಹಿಂಡಲಗಾ, ಕಣಬರ್ಗಿ ಹಾಗೂ ಸುವರ್ಣ ವಿಧಾನಸೌಧ ಬಳಿ ‘ಜಿಲ್ಲಾಡಳಿತ ಭವನ’ ನಿರ್ಮಾಣ ಕುರಿತು ಸಚಿವರು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಹಿಂಡಲಗಾ ಗ್ರಾಮದಲ್ಲಿ ಭವನ ನಿರ್ಮಾಣದಿಂದ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವುದರ ಜತೆಗೆ ದೂರದ ಹಳ್ಳಿಗಳಿಂದ ಬರುವ ಜನರಿಗೆ ಸಮಸ್ಯೆ ಉಂಟಾಗುತ್ತದೆ. ಕಣಬರ್ಗಿ, ಸುವರ್ಣ ವಿಧಾನಸೌಧದ ಬಳಿ ನಿರ್ಮಿಸಿದರೆ ಸಾರಿಗೆ ಸಮಸ್ಯೆ ಜತೆಗೆ ಜನರಿಗೆ ಬಂದು ಹೋಗಲು ಕಿರಿಕಿರಿ ಉಂಟು ಮಾಡಲಿದೆ. ಹೀಗಾಗಿ ಹಳೆ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ನಿರ್ಮಿಸುವುದು ಸೂಕ್ತ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

50 ಕೋಟಿ ರೂ.ದಲ್ಲಿ ಜಿಲ್ಲಾಡಳಿತ ಭವನ:

ಬೆಳಗಾವಿ ಮಹಾನಗರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ‘ಜಿಲ್ಲಾಡಳಿತ ಭವನ’ ನಿರ್ಮಾಣಕ್ಕೆ ಕ್ರಮ ಕೈಗೊಂಡಿರುವ ಜತೆಗೆ ಹಳೆ ಕಟ್ಟಡಗಳ ಸಂರಕ್ಷಣೆ ಜತೆಗೆ ಯಾವುದೇ ಹಾನಿ ಉಂಟಾಗದಂತೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಕಚೇರಿ ಆವರಣದಲ್ಲಿರುವ ಹಳೇ ಪಾರಂಪರಿಕ ಕಟ್ಟಡಗಳನ್ನು ಹೊರತು ಪಡಿಸಿ ಸಬ್‌ರಿಜಸ್ಟರ್, ಲೋಕಾಯುಕ್ತ ಕಚೇರಿ, ತಾಲೂಕು ಪಂಚಾಯಿತಿ, ತೋಟಗಾರಿಕೆ, ಕಾಡಾ ಕಟ್ಟಡಗಳನ್ನು ತೆರವುಗೊಳಿಸಿ ನೂತನ ಜಿಲ್ಲಾಡಳಿತ ಭವನ ನಿರ್ಮಿಸಲು ನಿರ್ಧಾರ ಕೈಗೊಂಡಿದೆ.

ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಉದ್ದೇಶದಿಂದ ನಗರದ ಹೊರವಲಯದಲ್ಲಿ ಕಣಬರ್ಗಿ, ಹಿಂಡಲಗಾ ಹಾಗೂ ಸುವರ್ಣ ವಿಧಾನಸೌಧ ಬಳಿ ಹೊಸದಾಗಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಲಾಯಿತು. ಸದ್ಯ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಖಾಲಿ ಪ್ರದೇಶದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವುದು ಸೂಕ್ತವಾಗಿದೆ. - ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಸದ್ಯ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಡಳಿತ ಕಚೇರಿ ಆವರಣದಲ್ಲಿಯೇ ಹೊಸದಾಗಿ ಜಿಲ್ಲಾಡಳಿತ ಭವನ ನಿರ್ಮಾಣ ಮಾಡುವುದು ಸೂಕ್ತ ಎಂದು ನಮ್ಮ ಅಭಿಪ್ರಾಯ ತಿಳಿಸಲಾಗಿದೆ. ಅಲ್ಲದೆ, ಕಣಬರ್ಗಿ, ಹಿಂಡಲಗಾ ಹಾಗೂ ಸುವರ್ಣ ವಿಧಾನಸೌಧ ಬಳಿ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net