

ಹೊಸದುರ್ಗ(ಚಿತ್ರದುರ್ಗ): ತಾಲೂಕಿನ ಕಂಚೀಪುರದ ಶ್ರೀ ಕಂಚೀವರದರಾಜ ಸ್ವಾಮಿ ದೇವಾಲಯದಲ್ಲಿ ಕಾಡಿನಿಂದ ಹಿಡಿದುತಂದಿದ್ದ ಮೊಲಕ್ಕೆ ಪೂಜೆ ಸಲ್ಲಿಸಿ, ಅದರ ಕಿವಿಗೆ ಚಿನ್ನದ ಓಲೆ ತೊಡಿಸಿ ಮರಳಿ ಕಾಡಿಗೆ ಬಿಡುವ ಮೂಲಕ ಉತ್ತರಾಯಣ ಪುಣ್ಯಕಾಲವನ್ನು ಸ್ವಾಗತಿಸಲಾಯಿತು. ಸಂಪ್ರದಾಯದಂತೆ ಗುರುವಾರ ಬೆಳಗ್ಗೆ ಕಾಡಿಗೆ ತೆರಳಿದ್ದ ಗ್ರಾಮಸ್ಥರು ಸಂಜೆವರೆಗೂ ಹುಡುಕಿದರೂ ಮೊಲ ಸಿಕ್ಕಿಲ್ಲ. ಶುಕ್ರವಾರ ಕಂಚೀವರದರಾಜಸ್ವಾಮಿಗೆ ಪೂಜೆ ಸಲ್ಲಿಸಿ ಕಾಡಿಗೆ ತೆರಳಿ ಮೊಲ ಹಿಡಿದು ತರುವಲ್ಲಿ ಯಶಸ್ವಿಯಾದರು. ಸಂಜೆ ದೇಗುಲದಿಂದ ಕಂಚಿವರದರಾಜ ಸ್ವಾಮಿ ಹಾಗೂ ಮೊಲವಿರುವ ಬುಟ್ಟಿಯನ್ನು ಮೆರವಣಿಗೆ ಮೂಲಕ ಊರ ಬಾಗಿಲಿಗೆ ಕರೆತಂದು ಪೂಜೆ ಸಲ್ಲಿಸಿ, ಅದರ ಕಿವಿಗೆ ಚಿನ್ನದ ಓಲೆ ತೊಡಿಸಿ ಕಾಡಿಗೆ ಮರಳಿ ಬಿಡಲಾಯಿತು. ವಿಶೇಷ ಆಚರಣೆ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.
ಆಚರಣೆಯ ಹಿನ್ನೆಲೆ: ಶೂನ್ಯಮಾಸದಲ್ಲಿ ಕಂಚೀವರದರಾಜ ಸ್ವಾಮಿಯ ದೈವಿಶಕ್ತಿ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಕಾರಣಕ್ಕಾಗಿ ಒಂದು ತಿಂಗಳು ಪ್ರತಿದಿನ ಮುಂಜಾನೆ ಸೂರ್ಯೋದಯಕ್ಕೆ ಮೊದಲು ದೇವರಿಗೆ ಪೂಜೆ, ಮಹಾಮಂಗಳಾರತಿ, ನೈವೇದ್ಯ ಅರ್ಪಿಸಲಾಗುತ್ತದೆ. ಉತ್ತರಾಯಣ ಪುಣ್ಯಕಾಲದಲ್ಲಿ ಮೊಲಕ್ಕೆ ಪೂಜೆ ಸಲ್ಲಿಸುವ ಮೂಲಕ ದೇವರನ್ನು ಆರಾಧಿಸಲಾಗುತ್ತದೆ.
ಕಿವಿಗೆ ಓಲೆ ಚುಚ್ಚುವ ಶಾಸ್ತ್ರ
ಸಂಕ್ರಾಂತಿ ದಿನ ಮುಂಜಾನೆ ಅರಣ್ಯದಿಂದ ಹಿಡಿದು ತರುವ ಮೊಲವನ್ನು ದೇಗುಲದಲ್ಲಿ ಬಿದಿರಿನ ಬುಟ್ಟಿಯಲ್ಲಿಟ್ಟು ಪೋಷಿಸಲಾಗುತ್ತದೆ. ಅದಕ್ಕೆ ಪೂಜೆ ಸಲ್ಲಿಸಿದ ಬಳಿಕ ಕಿವಿಗೆ ಚಿನ್ನದ ಓಲೆ ತೊಡಿಸಿ ದೇವರ ಮುಂದೆ ಮೂರು ಬಾರಿ ನಿವಾಳಿಸಿ, ಕಾಡಿಗೆ ಬಿಟ್ಟು ಬರಲಾಗುತ್ತದೆ. ಒಂದು ಬಾರಿ ಪೂಜಿಸಿದ ಮೊಲಕ್ಕೆ ಮತ್ತೆ ಪೂಜೆ ಸಲ್ಲಿಸುವುದಿಲ್ಲ. ಹಾಗಾಗಿ ಮುಂದಿನ ಸಲವೂ ಅದೇ ಮೊಲ ಹಿಡಿಯುವುದನ್ನು ತಪ್ಪಿಸುವ ಉದ್ದೇಶದಿಂದ ಅದರ ಕಿವಿಗೆ ಓಲೆ ತೊಡಿಸಲಾಗುತ್ತದೆ. ಮೊಲ ಸಿಗುವವರೆಗೆ ಸಂಕ್ರಾಂತಿ ಆಚರಣೆ ಮಾಡುವುದಿಲ್ಲ. ಈ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಬಂದಿದೆ.