ಕನಕಶ್ರೀ ಪ್ರಶಸ್ತಿಗೆ ಭಾಜನರಾದ ವ್ಯಾಸನಕೆರೆ ಪ್ರಭಂಜನಾಚಾರ್ಯರ ಪರಿಚಯ ಇಲ್ಲಿದೆ... Kanaka shri award

Kanaka shri award
Published on

Kanaka shri award : ಕನಕದಾಸ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರ ನೀಡುವ ಕನಕಶ್ರೀ ಪ್ರಶಸ್ತಿಗೆ ಈ ಬಾರಿ ಹಿರಿಯ ವಿದ್ವಾಂಸ ವ್ಯಾಸನಕೆರೆ ಪ್ರಭಂಜನಾಚಾರ್ಯರು ಆಯ್ಕೆಯಾಗಿದ್ದಾರೆ.

ಕನಕಶ್ರೀ ಪ್ರಶಸ್ತಿಯು 5 ಲಕ್ಷ ರೂ., ಕನಕದಾಸರ ಪುತ್ಥಳಿ ಮತ್ತು ಫಲಕವನ್ನು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನ. 18) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಕನಕದಾಸ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಾಗವತಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಪ್ರಭಂಜನಾಚಾರ್ಯರು ರಚಿಸಿದ್ದು, ಅವರ ಕುರಿತಾದ ಕಿರು ಪರಿಚಯ ಇಲ್ಲಿದೆ.

ವ್ಯಾಸನಕೆರೆ ಪ್ರಭಂಜನಾಚಾರ್ಯರರು 1947, ಜೂನ್​ 15ರಂದು ಜನಿಸಿದರು. 78 ವರ್ಷದ ಪ್ರಭಂಜನಾಚಾರ್ಯರು ಭಾರತೀಯ ಸಂಸ್ಕೃತಿ ಪರಂಪರೆ ಕುರಿತ ಪ್ರವಚನಗಳಿಗೆ ಹೆಸರುವಾಸಿಯಾದವರು. ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಾಗವತದ ಮೇಲೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಸಂಪಾದಿಸಿದ್ದಾರೆ. ಈ ಸಾಧನೆಗಾಗಿ ಅನೇಕ ಪ್ರಶಸ್ತಿ ಅವರ ಮುಡಿಗೇರಿದೆ. ವೃತ್ತಿಯಲ್ಲಿ ಅವರು ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ಸ್ವಯಂ ನಿವೃತ್ತಿ ಪಡೆದು ಶ್ರೀ ಜಯತೀರ್ಥ ಹಸ್ತಪ್ರತಿ ಗ್ರಂಥಾಲಯವನ್ನು ಸ್ಥಾಪಿಸಿದರು. ಕನಕದಾಸರ ಸಮಗ್ರ ಕೀರ್ತನೆಗಳ ಕೃತಿಯನ್ನು ಹೊರತಂದಿದ್ದಾರೆ.

ನಾಡಿನುದ್ದಕ್ಕೂ ಸಂಚರಿಸಿ, ಸಹಸ್ರಾರು ಕನ್ನಡ, ಸಂಸ್ಕೃತ ತಾಡವಾಲೆ ಹಸ್ತಪ್ರತಿಗಳ ಸಂಗ್ರಹ ಮಾಡಿ ಸಂರಕ್ಷಿಸುತ್ತಿದ್ದಾರೆ. ದಾಸಸಾಹಿತ್ಯದ ಸಹಸ್ರಾರು ಪ್ರಕಾಶಿತ ಕೃತಿಗಳನ್ನು ಸಂಶೋಧಿಸಿದ್ದಾರೆ. ಸಂಸ್ಕೃತದ ಅನೇಕ ಅಮೂಲ್ಯ ದಾರ್ಶನಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದ, ವಿವರಣೆಗಳನ್ನು ನೀಡಿ ಸಂಪಾದಿಸಿ ಪ್ರಕಾಶನ ಮಾಡಿದ್ದಾರೆ. ತಾವೇ ಸ್ಥಾಪಿಸಿದ ಸಂಶೋಧನ ಸಂಸ್ಥೆಗಳ ಮೂಲಕ ಗ್ರಂಥಗಳ ಸಂರಕ್ಷಣೆ, ಸಂಪಾದನೆ, ಹಸ್ತಪ್ರತಿಗಳ ಡಿಜಿಟಲೀಕರಣ ಮೊದಲಾದ ಕಾರ್ಯಗಳನ್ನು ಅಪಾರವಾಗಿ ಮಾಡಿದ್ದಾರೆ. ಹರಿದಾಸ ಸಾಹಿತ್ಯದ ಒಳನೋಟಗಳನ್ನು ಸಾಂಸ್ಕೃತಿಕ ಹಾಗೂ ದಾರ್ಶನಿಕ ಹಿನ್ನೆಲೆಯಲ್ಲಿ ಒದಗಿಸಿ, ನಾಡು, ನುಡಿಗಳಿಗೆ ಅದರಿಂದಾದ ಕೊಡುಗೆಯನ್ನು ಸಾಧಾರವಾಗಿ ನಿರೂಪಿಸಿರುವರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಅಧ್ಯಕ್ಷ ಭಾಷಣ, ಹತ್ತಾರು ಸಂಸ್ಥೆಗಳ ಪ್ರತಿಷ್ಠಿತ ಸದಸ್ಯತ್ವ, ಮಾರ್ಗದರ್ಶನ ಇವರಿಂದ ನಡೆದಿದೆ. ಮುನ್ನೂರಕ್ಕಿಂತ ಹೆಚ್ಚು ಮೌಲಿಕ ಗ್ರಂಥಗಳು, ಸಾವಿರಾರು ಸಂಶೋಧನ ಲೇಖನಗಳು ಇವರ ಅಪೂರ್ವ ಸಾಧನೆಯಾಗಿವೆ.

Kanaka shri award

"ಶ್ರೀಕನಕದಾಸರು ಮತ್ತು ಹರಿದಾಸಸಾಹಿತ್ಯಕ್ಕೆ ಸಂಶೋಧನ ಬರಹಗಳಿಂದ ಅತ್ಯಮೂಲ್ಯ ಸೇವೆ ಸಲ್ಲಿಸಿದವರು ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರು. ಶ್ರೀಕನಕದಾಸರನ್ನು ಕುರಿತು 2000 ಪುಟಗಳ ವ್ಯಾಪ್ತಿಯ ಆರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನಕದಾಸರನ್ನು ಅಧ್ಯಯನ ಮಾಡಲು ಇವು ಪ್ರಸ್ತುತ ಲಭ್ಯವಿರುವ ಅಮೂಲ್ಯ ಗ್ರಂಥಗಳಾಗಿವೆ. ಇವರ ಗ್ರಂಥಗಳು ಶ್ರೀಕನಕದಾಸರಿಗೆ ಸಂಬಂಧಪಟ್ಟ ಅನೇಕ ಹೊಸ ವಿಚಾರಗಳನ್ನು ಹೇಳುತ್ತವೆ. ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರು ಕನಕದಾಸರ ಬಗ್ಗೆ ಮುಂದೆ ಅಧ್ಯಯನ ಮಾಡುವವರಿಗೆ ಅನೇಕ ಬಗೆಯ ಮಹತ್ವದ ಸಾಮಗ್ರಿಗಳನ್ನು ಒದಗಿಸಿದ್ದಾರೆ. ಜೊತೆಗೆ ಅವರ ಕೃತಿಗಳಿಗೆ ಈವರೆಗೆ ಯಾರೂ ಮಾಡದ ಹೊಸ ಹೊಳಹುಗಳನ್ನು ಕೊಟ್ಟಿರುತ್ತಾರೆ.

ಶ್ರೀಕನಕದಾಸರು ಶ್ರೇಷ್ಠ ಕವಿ, ಸಮಾಜಸುಧಾರಕ, ದಾರ್ಶನಿಕ ಹಾಗೂ ಭಕ್ತ ಎಂಬುದನ್ನು ಅವರ ಕೃತಿಗಳಿಂದಲೇ ಸೋದಾಹರಣವಾಗಿ ಇವರು ನಿರೂಪಿಸಿರುವರು. ಇವರು ಮೂಲತಃ ಸಂಸ್ಕೃತ ಭಾಷೆಯ ಬಹುದೊಡ್ಡ ವಿದ್ವಾಂಸರು, ಅದರ ಪ್ರಯೋಜನ ಶ್ರೀಕನಕದಾಸರ ಕೃತಿಯ ಅಧ್ಯಯನಕ್ಕೆ ಲಭಿಸಿದೆ. ಶ್ರೀಕನಕದಾಸರು ಸಂಸ್ಕೃತ ಸಾಹಿತ್ಯದಲ್ಲೂ ಸಹ ಎಂತಹ ಪರಿಣತಿ ಪಡೆದಿದ್ದರು ಎಂಬುದನ್ನು ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು ಶ್ರೀಕನಕದಾಸರ ಕೃತಿಗಳಿಂದಲೇ ಸಾಬೀತು ಮಾಡಿರುವರು. ಈವರೆಗೆ ಯಾರೂ ಶ್ರೀಕನಕದಾಸರ ಈ ಮುಖದ ಬಗ್ಗೆ ಮಾಡದ ಅಪೂರ್ವ ಸಂಶೋಧನೆ ಇದಾಗಿದೆ. ಇವರು ಪ್ರಖ್ಯಾತ ಸಂಶೋಧಕರು. ಸಂಸ್ಕೃತ ಭಾಷೆಯಲ್ಲಿ ಅನೇಕ ಅಪೂರ್ವ ತತ್ತ್ವಶಾಸ್ತ್ರಗ್ರಂಥಗಳನ್ನು ವ್ಯಾಖ್ಯಾನಸಮೇತ ಸಂಸ್ಕೃತ, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿ ಪ್ರಕಾಶಪಡಿಸಿರುವರು.

ದಾಸಸಾಹಿತ್ಯವನ್ನು ಹಾಗೂ ಇತರ ವಿಷಯಗಳನ್ನು ಕುರಿತ ಅವರ ಅನೇಕ ಕೃತಿಗಳು ತೆಲುಗು, ತಮಿಳು, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ಅನುವಾದಗೊಂಡು ಪ್ರಕಾಶಿತವಾಗಿವೆ. ಸಂಸ್ಕೃತದಲ್ಲೂ ಹತ್ತಾರು ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಪ್ರಪಂಚಕ್ಕೆ ಇವರು ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ ರಾಷ್ಟ್ರಪತಿ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಅಲ್ಲದೆ, ಕರ್ನಾಟಕದ ಇತರ ಸಕಲ ಹರಿದಾಸರನ್ನು ಕುರಿತು ಇವರು ಅಪಾರ ಕೆಲಸ ಮಾಡಿರುವರು. ಪ್ರಮುಖ ಹರಿದಾಸರ ಸಕಲ ಕೃತಿಗಳನ್ನು ಸಹ ವ್ಯವಸ್ಥಿತವಾಗಿ ಸಂಪಾದಿಸಿ, ಕ್ರಮವಾಗಿ ಪ್ರಕಾಶನಗೊಳಿಸುತ್ತಿರುವರು. ಈಗಾಗಲೇ ಅಂತಹ 20ಕ್ಕಿಂತ ಹೆಚ್ಚು ಕೃತಿಗಳು ಅವರ ಸಂಪಾದನೆಯಲ್ಲಿ ಬೆಳಕು ಕಂಡಿವೆ. ಹರಿದಾಸಸಾಹಿತ್ಯದ ಗಂಗೋತ್ರಿಯಾದ ಮಧ್ವಸಿದ್ಧಾಂತದ ಬಗ್ಗೆ ಇವರು ಮಾಡಿರುವ ಕಾರ್ಯ ಅಗಾಧವಾದುದು. ಭಾರತೀಯ ಸಂಸ್ಕೃತಿಗೆ, ಕನ್ನಡಸಾಹಿತ್ಯಕ್ಕೆ ಇವರಿಂದ ಸಂದಿರುವ ಕೊಡುಗೆ ಅಪಾರವಾದುದು.

ವ್ಯಾಸನಕೆರೆ ಪ್ರಭಂಜನಾಚಾರ್ಯರು ಸ್ವೀಕರಿಸಿದ ಪ್ರಶಸ್ತಿಗಳು

* ರಾಷ್ಟ್ರಪತಿಪ್ರಶಸ್ತಿ (2004)

* ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (2002)

* ಕರ್ನಾಟಕ ಸರ್ಕಾರದ ಸಂಸ್ಕೃತ ವಿದ್ವತ್ ಪ್ರಶಸ್ತಿ

*. ಕರ್ನಾಟಕ ಸರಕಾರದ ಅತ್ಯುತ್ತಮ ಸಂಸ್ಕೃತ ಶಿಕ್ಷಕ ಪ್ರಶಸ್ತಿ

* ವಿದ್ಯಾವಾಚಸ್ಪತಿ

* ಸುವರ್ಣಕಂಕಣ ಪ್ರಶಸ್ತಿ

* ರಾಘವೇಂದ್ರಾನುಗ್ರಹಪ್ರಶಸ್ತಿ (ರಾಘವೇಂದ್ರಮಠ, ಮಂತ್ರಾಲಯ)

*. ವೇದವ್ಯಾಸ ಸಮ್ಮಾನ್, ಮದ್ರಾಸ್ ವಿಶ್ವವಿದ್ಯಾನಿಲಯ

* ವಿದ್ಯಾವಾರಿಧಿ ಪ್ರಶಸ್ತಿ, ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ, ತಿರುಪತಿ

*. ಮಹಾಭಾರತರತ್ನಪ್ರಶಸ್ತಿ, ಭಂಡಾರಕೆರೆಮಠ, ಬಾರಕೂರು ೧೧-೧೫).

ಗೀತಾರತ್ನಾಕರ, ವೇದವಿದ್ಯಾವಿಚಕ್ಷಣ, ತತ್ತ್ವವಾಚಸ್ಪತಿ, ಆರ್ಯಭಟ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net