

ಚಿಕ್ಕಮಗಳೂರು: ತರೀಕೆರೆ ತಾಲೂಕು ಭದ್ರಾ ಹುಲಿ ಸಂರಕ್ಷಿತ ಪ್ರದೇಶವಾದ ತಣಿಗೆಬೈಲು ಉಪ ಅರಣ್ಯ ವಲಯದಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ದೊಡ್ಡ ಹಗರಣ ನಡೆದಿದ್ದರೂ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಆರೋಪಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಣಿಗೆಬೈಲು ಅರಣ್ಯ ವಲಯದಲ್ಲಿ ೩೦೦ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಸಾಗಣೆ ಮಾಡಲಾಗಿದೆ. ಮರಗಳ ಮಾರಣಹೋಮವೇ ನಡೆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ಬಗ್ಗೆ ಆರ್‌ಟಿಐ ಕಾಯಿದೆ ಮೂಲಕ ಕೆ.ಕೆ ಸುಬ್ಬಯ್ಯ ಎಂಬುವವರು ಮಾಹಿತಿ ಪಡೆದು ದಾಖಲೆ ಸಹಿತ ಮುಖ್ಯಮಂತ್ರಿಗಳಿಗೆ, ಅರಣ್ಯ ಸಚಿವರಿಗೆ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾವು ಸಲ್ಲಿಸಿದ ದೂರಿನ ಆಧಾರದಲ್ಲಿ ಅರಣ್ಯ ರಕ್ಷಕ ಹಾಗೂ ಗಸ್ತು ಸೇವಕ ಇಬ್ಬರೂ ಕೆಳ ಹಂತದ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಇಷ್ಟೊಂದು ದೊಡ್ಡ ಹಗರಣ ನಡೆಯಲು ಮೇಲಧಿಕಾರಿಗಳ ಸಹಕಾರವಿಲ್ಲದೆ ಸಾಧ್ಯವಿರುವುದಿಲ್ಲ. ಇಲಾಖೆಯ ಮುಖ್ಯಸ್ಥರಾಗಿರುವ ವಲಯ ಅರಣ್ಯಾಧಿಕಾರಿ ಸಂಗೀತ ಅವರು ಪೂರ್ಣ ಸೂತ್ರದಾರಿ ಆಗಿದ್ದು, ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮಗಳು ನಡೆದಾಗ ಮೇಲಧಿಕಾರಿಗಳು ಹೊಣೆಗಾರರಾಗುತ್ತಾರೆ. ಕೆಳಮಟ್ಟದ ನೌಕರರನ್ನು ಅಮಾನತುಗೊಳಿಸುವ ಮೂಲಕ ಈ ಅಕ್ರಮವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ವಿವಿಧ ದಲಿತಪರ ಸಂಘಟನೆಗಳೊAದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ತಣಿಗೆಬೈಲು ನಿವಾಸಿ ಮಂಜುನಾಥ್, ತರೀಕೆರೆಯ ಅರುಳ್ ಪ್ರಕಾಶ್, ಕಿರಣ್ ಉಪಸ್ಥಿತರಿದ್ದರು.