ಮಾವು ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ ; ಮೈಸೂರಿನಲ್ಲಿ 24 ರಿಂದ ಮಾವು, ಹಲಸು ಮೇಳ

kesar mango
Published on

ಅವಿನಾಶ್ ಜೈನಹಳ್ಳಿ ಮೈಸೂರು

ಮಾವು ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ನಗರದಲ್ಲಿ ಮುಂದಿನ ವಾರ ಮಾವು ಮತ್ತು ಹಲಸು ಮೇಳ ಆಯೋಜನೆಗೊಂಡಿದೆ. ಒಂದೇ ಸೂರಿನಡಿ ಮಾವಿನ ವಿವಿಧ ತಳಿಯ ಹಣ್ಣುಗಳನ್ನು ಖರೀದಿಸಿ ರುಚಿ ಸವಿಯುವುದಲ್ಲದೆ, ಬಗೆಬಗೆಯ ಹಲಸಿನ ಸ್ವಾದವನ್ನೂ ಆಸ್ವಾದಿಸಬಹುದು !

ತೋಟಗಾರಿಕೆ ಇಲಾಖೆ, ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ನಗರದ ಕುಪ್ಪಣ್ಣ ಪಾರ್ಕ್ ಆವರಣದಲ್ಲಿ ಮೇ 24, 25 ಮತ್ತು 26 ರಂದು ‘ಮಾವು ಮತ್ತು ಹಲಸು’ ಮೇಳ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. ಮೂರು ದಿನಗಳ ಕಾಲ ಮೇಳ ನಡೆಸುವ ಉದ್ದೇಶವಿದ್ದು, ವಿವಿಧ ಸ್ವಾದದ ಮಾವು, ಹಲಸು ಮೈಸೂರಿಗರಿಗೆ ಲಭ್ಯವಾಗಲಿದೆ.

ಈ ಸಂಬಂಧ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಲೋಕಸಭಾ ಚುನಾವಣೆ ಬಳಿಕ ರೈತರ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ಮೇಳದ ದಿನಾಂಕ ಅಂತಿಮಗೊಳಿಸಿದ್ದಾರೆ. ಮಾವಿನಹಣ್ಣು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಈ ಹಣ್ಣುಗಳ ಬೆಳೆಗಾರರಿಗೆ ಉತ್ತಮ ದರ ದೊರಕುವಂತೆ ಮಾಡುವುದು ಹಾಗೂ ಗ್ರಾಹಕರು ನ್ಯಾಯಯುತ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಲು ಉತ್ತೇಜನ ನೀಡುವ ಉದ್ದೇಶದೊಂದಿಗೆ ತೋಟಗಾರಿಕೆ ಇಲಾಖೆ ಹಲವು ವರ್ಷಗಳಿಂದ ಮಾವು ಮತ್ತು ಹಲಸು ಮೇಳ ಏರ್ಪಡಿಸುತ್ತಿದೆ. ಈ ಬಾರಿಯೂ ಅದನ್ನು ಮುಂದುವರಿಸಲು ಸಿದ್ಧತೆ ನಡೆಸಿದೆ.

ಉತ್ಕೃಷ್ಟ ದರ್ಜೆಯ ಫಲಕ್ಕೆ ಒತ್ತು:

ಮಾವು ಪ್ರಿಯರ ಆರೋಗ್ಯದ ಹಿತದೃಷ್ಟಿಯಿಂದ ಕ್ಯಾಲ್ಸಿಯಂಕಾರ್ಬೈಡ್‌ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಉತ್ಕೃಷ್ಟ ದರ್ಜೆಯ ವಿವಿಧ ತಳಿಯ ಹಣ್ಣುಗಳು ಮೇಳದಲ್ಲಿ ಗ್ರಾಹಕರಿಗೆ ದೊರೆಯುವಂತೆ ಮಾಡುತ್ತಿದ್ದು, ಉತ್ತಮ ಬೆಲೆ ನಿಗದಿಪಡಿಸಲಾಗುತ್ತದೆ.

ವಿವಿಧ ಮಾವು, ಹಲಸಿನ ತಳಿಗಳನ್ನು ಮೇಳದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ. ಮಾನಕೂರ, ಆಮ್ಲೆಟ್, ಚೈತ್ರಪೈರಿ, ಸೇಲಂ, ಶಿರಸಿ ಲೋಕಲ್, ರತ್ನಗಿರಿ(ಆಲ್ಫನ್ಸ್), ಬಾದಾಮಿ, ರಸಪೂರಿ, ಮಲಗೋವ, ಮಲ್ಲಿಕಾ, ಸಿಂಧೂರ, ತೋತಾಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಸರ್, ಸಕ್ಕರೆಗುತ್ತಿ, ಆಮ್ರಪಾಲಿ, ದಿಲ್‌ಪಸಂದ್ ಸೇರಿದಂತೆ ಹಲವು ತಳಿಯ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡುವ ಮಾಡುವ ಸಾಧ್ಯತೆ ಇದೆ. ಒಂದೊಂದು ಜಾತಿಯ ಮಾವಿಗೂ ಒಂದೊಂದು ಬೆಲೆ ನಿಗದಿ ಮಾಡಲಾಗುತ್ತದೆ. ತೋಟಗಾರಿಕೆ ಇಲಾಖೆ ದರ ನಿಗದಿಪಡಿಸಲಿದೆ.

ನೈಸರ್ಗಿಕ ಹಣ್ಣು ಮಾರಾಟ:

ನೈಸರ್ಗಿಕವಾಗಿ ಹಣ್ಣಾಗಿಸಿದ ಮಾವಿನಹಣ್ಣುಗಳ ಜತೆಗೆ, ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿಸಿದ ಹಣ್ಣುಗಳೂ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಿವೆ. ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಸಿಂಪಡಿಸಿದ ಹಣ್ಣುಗಳ ಸೇವನೆಯಿಂದ ಕ್ಯಾನ್ಸರ್, ಅಸ್ತಮಾ, ಕೆಮ್ಮು, ನೆಗಡಿ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಆದರೆ ನೈಸರ್ಗಿಕವಾಗಿ ಮತ್ತು ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿಸಿದ ಹಣ್ಣುಗಳ ನಡುವಿನ ವ್ಯತ್ಯಾಸ ಗುರುತಿಸುವುದು ಗ್ರಾಹಕರಿಗೆ ಕಷ್ಟವಾಗಲಿದೆ. ಆದ್ದರಿಂದ ಮೇಳದಲ್ಲಿ ಈ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಮಾರುಕಟ್ಟೆ ಪ್ರವೇಶಿಸಿದ ‘ರಾಜ’

ಹಣ್ಣುಗಳ ರಾಜ ಎಂದೇ ಖ್ಯಾತವಾದ ಮಾವು ಮೈಸೂರಿನ ಮಾರುಕಟ್ಟೆ ಪ್ರವೇಶಿಸಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ವಿವಿಧ ತಳಿಯ ಹಣ್ಣುಗಳು ಜನರ ಬಾಯಲ್ಲಿ ನೀರೂರಿಸುತ್ತಿವೆ.
ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಾದಾಮಿ, ರಸಪುರಿ, ತೋತಾಪುರಿ, ಬಂಗನಪಲ್ಲಿ, ದಶೇರಿ, ಮಲ್ಲಿಕಾ, ಮಲಗೋವ, ನೀಲಂ, ಸಿಂಧೂರ ತಳಿಯ ಮಾವು ಮೈಸೂರಿನ ಮಾರುಕಟ್ಟೆ ಪ್ರವೇಶ ಮಾಡಿದೆ. ಕುಕ್ಕರಹಳ್ಳಿ ಕೆರೆ ರಸ್ತೆ, ಜೆಎಲ್‌ಬಿ ರಸ್ತೆ, ಮಹಾರಾಜ ಕಾಲೇಜು ಮುಂಭಾಗದ ರಸ್ತೆ, ಕ್ರಾಫರ್ಡ್ ಹಾಲ್ ಮುಂಭಾಗ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ನಗರದ ಹಲವೆಡೆ ತಳ್ಳುಗಾಡಿ ಹಾಗೂ ಆಟೋರಿಕ್ಷಾಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ವಿಟಮಿನ್ ಭರಿತ:

ಮಾವಿನಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಅಂಶಗಳಿರುತ್ತವೆ. ಅಲ್ಲದೆ, ನಾರಿನಾಂಶ ಇರುತ್ತದೆ. ಮಾವು ಮಲಬದ್ಧತೆ ನಿವಾರಣೆಗೆ ತುಂಬ ಒಳ್ಳೆಯದು. ಜತೆಗೆ, ದೇಹದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಾವಿನಹಣ್ಣಿನ ಸೀಜನ್ ಬಂದಾಗಲೆಲ್ಲ ನಾವು ಮಾವಿನ ವಿವಿಧ ತಳಿಯ ಹಣ್ಣುಗಳನ್ನು ಸವಿಯುವುದನ್ನು ತಪ್ಪಿಸುವುದಿಲ್ಲ. ನಮ್ಮ ಮನೆಯಲ್ಲಿ ಮಾವು ಎಂದರೆ ಎಲ್ಲರಿಗೂ ಪಂಚಪ್ರಾಣ. ವಾರಕ್ಕೆ ಎರಡು ಬಾರಿ ಹಣ್ಣು ಖರೀದಿಸುತ್ತೇವೆ ಎನ್ನುತ್ತಾರೆ ಕುವೆಂಪುನಗರದ ನಿವಾಸಿ ಶಿವಕುಮಾರ್.

ತೋಟಗಾರಿಕೆ ಇಲಾಖೆ, ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ನಗರದ ಕುಪ್ಪಣ್ಣ ಪಾರ್ಕ್ ಆವರಣದಲ್ಲಿ ಈ ಬಾರಿ ಮಾವು ಮತ್ತು ಹಲಸು ಮೇಳವನ್ನು ಮೇ 24, 25 ಮತ್ತು 26 ರಂದು ಆಯೋಜಿಸಲಾಗುತ್ತದೆ. ಈ ಸಂಬಂಧ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ಶಶಿಧರ್ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ, ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net