ಯುವಕರಿಗೆ ತರಬೇತಿ ನೀಡಲು ಕೌಶಲ ಕೇಂದ್ರ ಆರಂಭ

gramsabe
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಗ್ರಾಪಂಮಟ್ಟದಲ್ಲಿ ಕೌಶಲ ಕೇಂದ್ರವೊಂದನ್ನು ಸ್ಥಾಪಿಸಿ, ಈ ಕೇಂದ್ರದ ಮೂಲಕ ಯುವಕರಿಗೆ ತರಬೇತಿ ನೀಡಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಮುನಿರತ್ನಮ್ಮ ಮುನಿರಾಜು ತಿಳಿಸಿದರು.
ತಾಲೂಕಿನ ಹೆನ್ನಾಗರ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿ,
ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ 300 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ. ನಮ್ಮ ಗ್ರಾಪಂ ಕ್ರಿಯಾಶೀಲ ಚಟುವಟಿಕೆಗಳಿಗೆ ಮಾದರಿಯಾಗಿದ್ದು, ಶಿಕ್ಷಣ, ಆರೋಗ್ಯ, ಕೌಶಲಾಭಿವೃದ್ಧಿ, ಮಹಿಳಾ ಸಬಲೀಕರಣ ಸೇರಿ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಎಚ್.ಜೆ.ಪ್ರಸನ್ನಕುಮಾರ್ ಮಾತನಾಡಿ, ವಾರ್ಡ್‌ಮಟ್ಟದಲ್ಲಿ ಸಭೆ ನಡೆಸಿ, ಅಲ್ಲಿನ ಸಲಹೆ-ಸೂಚನೆ ಆಧರಿಸಿ ಸಮಸ್ಯೆ ಪರಿಹಾರಕ್ಕೆ ಗ್ರಾಪಂಮಟ್ಟದಲ್ಲಿ ಯೋಜನೆ ತಯಾರಿಸಲಾಗಿದೆ. ಎಲ್ಲ ಭಾಗಗಳಿಗೂ ಲಭ್ಯ ಅನುದಾನವನ್ನು ಸಮನಾಗಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಗ್ರಾಮಸಭೆಯಲ್ಲಿ ಗ್ರಾಮಸ್ಥರು ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಹೆನ್ನಾಗರ ಕೆರೆಗೆ ಕೈಗಾರಿಕೆಗಳ ತ್ಯಾಜ್ಯ ಹರಿದು ಕಲುಷಿತಗೊಂಡಿದೆ. ತ್ಯಾಜ್ಯ ಹರಿಯುವುದನ್ನು ತಡೆಯಬೇಕು. ಕೆರೆಯನ್ನು ಶುದ್ಧೀಕರಣ ಮಾಡಿ, ಸಾರ್ವಜನಿಕ ಬಳಕೆಗೆ ಯೋಗ್ಯವಾಗುವಂತೆ ಮಾಡಬೇಕು. ರಾಜಾಪುರ ಸರ್ಕಾರಿ ಶಾಲೆ ಶಿಥಿಲವಾಗಿದ್ದು, ಕುಸಿಯುವ ಹಂತದಲ್ಲಿದೆ. ಕೂಡಲೇ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net