

ಕುಂದಾಪುರ: ಬೈಂದೂರು ತಾಲೂಕು ಒತ್ತಿನೆಣೆ ಸಮೀಪ ಹೇನಬೇರು ರಸ್ತೆಯಲ್ಲಿ ಕಾರು ಸಹಿತ ಕಾರ್ಕಳ ಮೂಲದ ಆನಂದ ದೇವಾಡಿಗ ಎನ್ನುವರನ್ನು ಸುಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಆ.1 ತನಕ ನ್ಯಾಯಾಂಗ ಬಂಧನ ವಿಧಿಸಿ ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಾಧೀಶ ಧನೇಶ್ ಮುಗಳಿ ಆದೇಶ ನೀಡಿದ್ದಾರೆ.
ಜು.12 ತಡರಾತ್ರಿ ಹೇನಬೇರು ರಸ್ತೆ ಬಳಿ ಈ ಅಮಾನುಷ ಘಟನೆ ನಡೆದಿದ್ದು ಮಾರು ದಿನ ಘಟನೆ ಬೆಳಕಿಗೆ ಬಂದಿದ್ದು ಜು.14 ರಂದು ಬೆಳಗ್ಗೆ ಪ್ರಕರಣದ ಪ್ರಮುಖ ಆರೋಪಿಗಳಾದ ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಹಾಗೂ ಇವರಿಗೆ ಪರಾರಿಯಾಗಲು ಸಹಕಾರ ನೀಡಿದ ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49), ನಿತಿನ್ ದೇವಾಡಿಗ (40) ಅವರನ್ನು ಬಂಧಿಸಲಾಗಿತ್ತು. ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಾಶ್ರೀ ವಾದಿಸಿದ್ದರು.
ಸುಟ್ಟು ಕೊಂದ ಆರೋಪಿಗಳಾದ ಸದಾನಂದ ಮತ್ತು ಶಿಲ್ಪಾಳನ್ನು ನ್ಯಾಯಾಲಯಕ್ಕೆ ಕರೆತಂದಿದ್ದು ಇಬ್ಬರು ಕೂಡ ಆವರಣದಲ್ಲಿ ಗುಸುಗುಸು ಮಾತನಾಡುತ್ತಿರುವುದು ಕಂಡುಬಂದಿದೆ. ಆರೋಪಿಗಳಿಬ್ಬರಲ್ಲಿ ಯಾವುದೇ ಪಶ್ಚಾತಾಪದ ಭಾವನೆಯಿಲ್ಲದಿದ್ದು ಸಾಮಾನ್ಯವಾಗಿಯೇ ಇದ್ದರು. ನ್ಯಾಯಾಲಯೊದಳಕ್ಕೆ ಪ್ರಕ್ರಿಯೆ ಮುಗಿದು ಹೊರಕ್ಕೆ ಕರೆತರುವಾಗಲು ಮಾಧ್ಯಮದ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದರು.